ಮಂಗಳೂರು: ಕೊರೊನಾ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಅದರಲ್ಲೂ ಪ್ರತಿನಿತ್ಯ ನೂರಾರು ಅಡೆತಡೆಗಳ ನಡುವೆಯೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಕುಗ್ರಾಮಗಳಿಗೆ ತೆರಳಿ ಸೇವೆ ಸಲ್ಲಿಸುತ್ತಿದ್ದಾರೆ.

ನಕ್ಸಲ್ ಪೀಡತ ಗ್ರಾಮವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲು. ರಭಸದಿಂದ ಹರಿಯುವ ಹೊಳೆಯನ್ನು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.

ಕೊರಗ ಕಾಲೋನಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸುರಿವ ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ಕಾಲು ಸಂಕ ಹಾಗೂ ತೂಗು ಸೇತುವೆಗಳ ಮೂಲಕ ದಾಟಿ ಪ್ರತಿದಿನ ಚಿಕಿತ್ಸೆ ನೀಡುತ್ತಿದ್ದಾರೆ. ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.








