ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆ, ಸುಮಾರು ಏಳು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಆಳಿದ ‘ಮೆಲೋಡಿ ಕ್ವೀನ್’ ಆಶಾ ಭೋಸ್ಲೆ (92) ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದೊಂದಿಗೆ ಭಾರತೀಯ ಸಂಗೀತದ ಒಂದು ಸುವರ್ಣ ಯುಗವೇ ಅಂತ್ಯಗೊಂಡಿದೆ.
ಶನಿವಾರ (ಏ.11) ತೀವ್ರ ಹೃದಯ ಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮದಾನಿ ಅವರು ಖಚಿತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೊನೆಯ ಕ್ಷಣಗಳು
ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆಶಾ ಭೋಸ್ಲೆ ಅವರ ಆರೋಗ್ಯ ಸ್ಥಿತಿ ಶನಿವಾರ ರಾತ್ರಿ ಗಂಭೀರವಾಗಿತ್ತು. ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಜ್ಞ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿಸಿತ್ತು. ಈ ಬಗ್ಗೆ ಅವರ ಮೊಮ್ಮಗಳು ಜನೈ ಭೋಸ್ಲೆ, “ನನ್ನ ಅಜ್ಜಿ ಅತಿಯಾದ ಆಯಾಸ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಆದರೆ, ಈ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಸಂಗೀತ ಲೋಕಕ್ಕೆ ಆಘಾತಕಾರಿ ಸುದ್ದಿ ಬಂದೆರಗಿರುತ್ತದೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂಗೀತದ ಹಿನ್ನೆಲೆಯಿಂದ ಬಂದ ಅಸಾಧಾರಣ ಪ್ರತಿಭೆ
1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ, ಸಂಗೀತದ ವಾತಾವರಣದಲ್ಲೇ ಬೆಳೆದವರು. ಅವರ ತಂದೆ, ಪಂಡಿತ್ ದೀನನಾಥ್ ಮಂಗೇಶ್ಕರ್ ಅವರು ಸ್ವತಃ ಶ್ರೇಷ್ಠ ಸಂಗೀತಗಾರರು ಮತ್ತು ರಂಗಭೂಮಿ ಕಲಾವಿದರು. ಆದರೆ, ಆಶಾ ಅವರಿಗೆ ಕೇವಲ 9 ವರ್ಷವಿದ್ದಾಗ ತಂದೆ ತೀರಿಕೊಂಡಿದ್ದು, ಕುಟುಂಬದ ಜವಾಬ್ದಾರಿ ನಿಭಾಯಿಸಲು ಅಕ್ಕ ಲತಾ ಮಂಗೇಶ್ಕರ್ ಅವರೊಂದಿಗೆ ಆಶಾ ಕೂಡ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು.
1948ರಲ್ಲಿ ‘ಚುನ್ರಿಯಾ’ ಚಿತ್ರದ ‘ಸಾವನ್ ಆಯಾ’ ಹಾಡಿನ ಮೂಲಕ ಹಿನ್ನೆಲೆ ಗಾಯನ ಆರಂಭಿಸಿದರೂ, ಅವರಿಗೆ ಸ್ವಂತಿಕೆ ತಂದುಕೊಟ್ಟಿದ್ದು 1950ರ ದಶಕದ ನಂತರ. ಅಕ್ಕ ಲತಾ ಮಂಗೇಶ್ಕರ್ ಸುಮಧುರ ಗೀತೆಗಳಿಗೆ ಧ್ವನಿಯಾಗುತ್ತಿದ್ದಾಗ, ಆಶಾ ಅವರು ಪಾಪ್, ಕ್ಯಾಬರೆ, ಮತ್ತು ಚೇಷ್ಟೆಯ ಹಾಡುಗಳನ್ನು ಹಾಡುವ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು.
ಬಹುಮುಖ ಪ್ರತಿಭೆಯ ಗಾನ ಸರಸ್ವತಿ
ಆಶಾ ಭೋಸ್ಲೆ ಕೇವಲ ಹಿಂದಿ ಚಿತ್ರರಂಗಕ್ಕೆ ಸೀಮಿತವಾಗಲಿಲ್ಲ. ಶಾಸ್ತ್ರೀಯ ಸಂಗೀತ, ಗಜಲ್, ಭಜನೆ, ಕವ್ವಾಲಿ, ಜಾನಪದ ಗೀತೆಗಳಿಂದ ಹಿಡಿದು ಪಾಪ್ ಸಂಗೀತದವರೆಗೂ ಅವರ ಧ್ವನಿ ಅನಾಯಾಸವಾಗಿ ಹರಿಯುತ್ತಿತ್ತು. ಆರ್.ಡಿ. ಬರ್ಮನ್, ಓ.ಪಿ. ನಯ್ಯರ್ ಅವರಂತಹ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಎವರ್ಗ್ರೀನ್. ‘ಪಿಯಾ ತೂ ಅಬ್ ತೋ ಆಜಾ’, ‘ದಮ್ ಮಾರೋ ದಮ್’, ‘ಚುರಾ ಲಿಯಾ ಹೈ ತುಮ್ನೆ’ ಮುಂತಾದ ಹಾಡುಗಳು ಅವರನ್ನು ಯುವಜನತೆಯ ನೆಚ್ಚಿನ ಗಾಯಕಿಯನ್ನಾಗಿ ಮಾಡಿದವು. 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವುದು ಅವರ ಸಂಗೀತ ಸಾಧನೆಗೆ ಹಿಡಿದ ಕೈಗನ್ನಡಿ.
ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅನನ್ಯ ಕೊಡುಗೆಗಾಗಿ ಭಾರತ ಸರ್ಕಾರ ಅವರಿಗೆ 2000ರಲ್ಲಿ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಮತ್ತು 2008ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮ ವಿಭೂಷಣ’ ನೀಡಿ ಗೌರವಿಸಿತು. ‘ಉಮ್ರಾವ್ ಜಾನ್’ (1981) ಚಿತ್ರದ ‘ದಿಲ್ ಚೀಜ್ ಕ್ಯಾ ಹೈ’ ಮತ್ತು ‘ಇಜಾಜತ್’ (1987) ಚಿತ್ರದ ‘ಮೇರಾ ಕುಚ್ ಸಮಾನ್’ ಹಾಡುಗಳಿಗಾಗಿ ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ಆಶಾ ಭೋಸ್ಲೆ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ಅವರ ಭೌತಿಕ ಶರೀರ ನಮ್ಮಿಂದ ದೂರವಾದರೂ, ಅವರ ಕಂಠಸಿರಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಚಿರಂಜೀವಿಯಾಗಿರುತ್ತದೆ.








