ಒಂದು ಸಮಾಜ ಆರೋಗ್ಯವಾಗಿರಲು ಮಹಿಳೆಯರ ಪಾತ್ರ ದೊಡ್ಡದು. ಹಿಂದಿನ ಕಾಲದಿಂದಲೂ ಅನೇಕ ವೀರ ನಾರಿಯರು, ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ, ಒಂದು ಸಮಾಜ ಸಧೃಡವಾಗಿರಬೇಕಾದರೆ, ಕುಟುಂಬಗಳು ಆರೋಗ್ಯವಂತರಾಗಿರಬೇಕು, ಆರೋಗ್ಯವಂತ ಕುಟುಂಬವಾಗಬೇಕಾದರೆ ಮನೆ ಹೆಣ್ಣುಮಗಳು ಆರೋಗ್ಯವಂತವಾಗಿರಬೇಕು. ಮೊದಲಿನಿಂದ ಅವಲೋಕನ ಮಾಡಿಕೊಂಡು ಬಂದಾಗ ಕಂಡದ್ದು ಮಹಿಳೆ ಸುತ್ತಮುತ್ತ ಇನ್ನೊಂದು ಮಹಿಳೆಯ ಸಹಾಯ ಇದ್ದೇ ಇತ್ತು. ಆ ಸಂಪ್ರದಾಯ ಇನ್ನೂ ಜೀವಂತವಾಗಿದೆ ಅಂತ ಹೇಳಿದರೆ ತಪ್ಪಾಗಲಾರದು.
ಆಯಿ, ದಾದಿ, ನಾನಿ, ಆಯಾ, ನರ್ಸಮ್ಮ, ಸೂಲಗಿತ್ತಿಯರು, ಸಮಾಜವನ್ನು ಪೂರ್ವದಿಂದಲೂ ಆರೋಗ್ಯಕರವಾಗಿಡಲು ಹಗಲಿರಳು ಶ್ರಮಿಸಿದ್ದಾರೆ. ವೈಜ್ಞಾನಿಕವಾಗಿ ಪಧ್ಧತಿಗಳು ಬೇರಾದರೂ, ಆಯಾ ಕಾಲಕ್ಕೆ ತಕ್ಕನಾಗಿ ತಮ್ಮನ್ನು ತಾವು ಬದಲಾವಣೆ ಮಾಡಿಕೊಂಡು ಬಂದಿದ್ದಾರೆ.
ಈ ಲೇಖನೇಯ ಪ್ರೇರಣೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಆಶಾಕಾರ್ಯಕರ್ತೆಯರು. ನಾನು ಗಮನಿಸಿದ ಹಾಗೆ ಇವತ್ತು ಆಶಾ ಭಗಿನಿಯರ ಸೇವೆ ಅತ್ಯಂತ ಶ್ಲಾಘನೀಯ ಅಂದರೆ ತಪ್ಪಾಗಲಾರದು. ಅವರ ಸೇವೆ ಅಹರ್ನಿಶಿ. ಸೇವೆಯನ್ನು ಅವ್ಯಹತವಾಗಿ ನಡೆಸಿಕೊಂಡು ಬಂದಿದ್ದಾರೆ. ಆಶಾ ಕಾರ್ಯಕರ್ತೆಯರು ಇಲ್ಲವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅನೇಕ ಕೆಲಸಗಳು ಸ್ಥಗಿತಗೊಳ್ಳುವುದು ಖಚಿತ ವೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಎ.ಎನ್.ಎಮ್ ಅಥವಾ ಮೆಡಿಕಲ್ ಸ್ಟಾಫ ಇಲ್ಲದ ಸಂಧರ್ಭದಲ್ಲಿ ಇವರು ತಮ್ಮ ಮಹತ್ತರ ಸೇವೆ ಸಲ್ಲಿಸುತ್ತಾರೆ.
ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆಗಳು ಅನನ್ಯ. ತಾಯಿಯ ನೋಂದಣಿಯಿಂದ ಹಿಡಿದು ಮಗುವಿನ ನೋಂದಣಿ ಮಾಡಿಸುವಲ್ಲಿ ಇವರದ್ದು ಮೇಲು ಗೈ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಅನೇಕ ಯೋಜನೆಗಳು ತಾಯಂದಿರಿಗೆ ತಲುಪಿಸುವವರೆಗೆ ಇವರು ಸನ್ನಧರು.
ಮಕ್ಕಳ ಆರೋಗ್ಯದ, ಚುಚ್ಚುಮದ್ದುಗಳ, ಮತ್ತು ಆರೋಗ್ಯದ ದಾಖಲಾತಿಗಳನ್ನು ಸರಿಯಾಗಿ ಸರ್ಕಾರಕ್ಕೆ ವದಗಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ ಕೆಲಸಕ್ಕೆ ಚ್ಯುತಿ ಬರದ ಹಾಗೆ ಸಂಪೂರ್ಣ ಸೇವೆ ಒದಗಿಸುತ್ತಿದ್ದಾರೆ. ಕಡು ಬಡ ಕುಟುಂಬದಿಂದ ಬರುವ ಮಹಿಳೆಯರಿಗೆ ಆಶಾ ಕೆಲಸ ಇಂದು ವರದಾನವೆಂದರೆ ತಪ್ಪಾಗಲಾರದು.
ಇವರು ಮಾಡುವ ಸೇವಾಕಾರ್ಯಗಳ ಪಟ್ಟಿ ಮಾಡಿದರೆ ಬಹುಶಃ ಹತ್ತಾರು ಪುಟಗಳು ಸಾಲದು. ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಇವರು ಒಂದು ಅವಿಸ್ಮರಣೀಯ ಕೊಂಡಿ. ಬನ್ನಿ, ಸಮಾಜದ ಎಲ್ಲ ಬಂಧುಗಳು ಇವರ ಕೆಲಸಕ್ಕೆ ಗೌರವಿಸೋಣ, ಇವರ ಆರೋಗ್ಯದ ನುಡಿಗಳನ್ನು ಆಲೀಸೋಣ, ಸಧೃಡ ಸಮಾಜ ಕಟ್ಟೋಣ.
ಲೇಖಕರು: ಅಮೀತ ವಿಶ್ವನಾಥ ಕುಲಕರ್ಣಿ
ಗ್ರಾಮ: ಚಿಕ್ಕನಂದಿ, ಗೋಕಾಕ ತಾಲೂಕು
ದೂರವಾಣಿ: 9972591014








