ಬೆಂಗಳೂರು: ಗೌರವಧನ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ಪದೇ ಪದೇ ಕಡೆಗಣಿಸುತ್ತಿದ್ದೆ ಎಂದು ಆರೋಪಿಸಿ
ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಹೋರಾಡುತ್ತಿರುವ ನಮಗೆ ಚಪ್ಪಾಳೆ, ಹೂ ಮಳೆಗಳ ಗೌರವ ಸಾಕು. ನಾವು ಗೌರವಯುತ ಬದುಕು ನಡೆಸಲು ಗೌರವಧನ ಬೇಕು ಎಂದು ಆಗ್ರಹಿಸಿದ್ದಾರೆ.

ಶುಕ್ರವಾರದಿಂದ ೪೨ ಸಾವಿರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಜುಲೈ೧೦ ರಿಂದ ಆಶಾ ಕಾರ್ಯಕರ್ತೆಯರ ಸೇವೆ ಸ್ಥಗಿತವಾಗಲಿದೆ. ಮಾಸಿಕ ಗೌರವ ಧನವನ್ನು ೧೨ ಸಾವಿರ ರೂ.ಗೆ ಹೆಚ್ಚಳ ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಆಗ್ರಹಿಸಿ ಮುಷ್ಕರ ನಡೆಸಲಿದ್ದಾರೆ.
ಕಳೆದ ಜನವರಿಯಿಂದ ಸರ್ಕಾರಕ್ಕೆ ೧೦ ಮನವಿ ಪತ್ರ ನೀಡಿದರೂ ಸ್ಪಂದಿಸಿಲ್ಲ. ಇದೀಗ ಗುತ್ತಿಗೆ ವೈದ್ಯರ ಬೆನ್ನಲ್ಲೇ ಸರ್ಕಾರಕ್ಕೆ ಅಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕಾವು ತಟ್ಟುತ್ತಿದೆ.
ಕೊರೋನಾ ತಡೆಯಲು ಅಶಾ ಕಾರ್ಯಕರ್ತೆಯರ ಪರಿಶ್ರಮ ಅಪಾರ. ಮನೆ ಮನೆಗೆ ತೆರಳಿ ಸಮೀಕ್ಷೆ, ಸೋಂಕು ಪತ್ತೆ ಹಚ್ಚುವಲ್ಲಿ ಇವರ ಪಾತ್ರ ಅತಿ ಮುಖ್ಯವಾಗಿದೆ. ಇದೀಗ ಇವರೆಲ್ಲರೂ ಮುಷ್ಕರ ನಡೆಸುತ್ತಿರುವುದಾಗಿ ಘೋಷಿಸಿರುವುದರಿಂದ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದೆ.







