ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಅತೀ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರವನ್ನು ಒಂದು ವಾರ ಲಾಕ್ ಡೌನ್ ಮಾಡಿ ಆದೇಶಿಸಿದೆ. ಇದರ ಮಧ್ಯೆ ಈ ಲಾಕ್ ಡೌನ್ ವಿಸ್ತರಣೆ ಹಾಗೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು, ಶನಿವಾರವೇ ಬೆಂಗಳೂರು ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಎಲ್ಲೆಲ್ಲಿ ಹೋಗಬೇಕಾದವರು ಇದ್ದಾರೋ ಅವರು ನಾಳೆ ಹೋಗಬಹುದು. ಯರ‍್ಯಾರು ಹೋಗಬೇಕು ಅಂತ ಇದ್ದಾರೋ ಅವರು ನಾಳೆಯೇ ಹೊರಟು ಬಿಡಿ ಎಂದು ಹೇಳುವ ಮೂಲಕ ಲಾಕ್ ಡೌನ್ ವಿಸ್ತರಣೆ ಬಗ್ಗೆ ಸುಳಿವು ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಬೆಂಗಳೂರು ಲಾಕ್ ಡೌನ್ ಮಾರ್ಗಸೂಚಿ ವಿಚಾರವಾಗಿ ಮಹತ್ವದ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಕೊರೊನಾ ಸ್ಪೀಡ್ ಕಟ್ ಮಾಡುವ ಹಿನ್ನೆಲೆಯಲ್ಲಿ ಏಳು ದಿನ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್ ಡೌನ್ ಮಾಡಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳು ಜೊತೆ ಸಭೆ ಮಾಡಿದ ನಂತರ ಉಳಿದ ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೋಮವಾರ ಒಂದು ವಾರದ ಲಾಕ್ ಡೌನ್ ಮಾರ್ಗಸೂಚಿ ಪ್ರಕಟ ಮಾಡುತ್ತೇವೆ ಎಂದು ಮಾಹಿತಿ ನೀಡಿದ ಅಶೋಕ್, ಬೆಂಗಳೂರು ಲಾಕ್ ಡೌನ್ ಸದ್ಯಕ್ಕೆ ಏಳು ದಿನ ಮಾತ್ರ. ಸ್ಪೀಡ್ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡುತ್ತೇವೆ. ನಂತರ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂದು ತಜ್ಞರ ವರದಿ ಪಡೆದು ಎರಡು ದಿನ ಮೊದಲೇ ತಿಳಿಸುತ್ತೇವೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಜನರಲ್ಲಿ ಸರ್ಕಾರದ ಪರವಾಗಿ ಆರ್.ಅಶೋಕ್ ಕೈ ಮುಗಿದು ವಿನಂತಿ ಮಾಡಿದರು.
12 ಜಿಲ್ಲೆಗಳು ಲಾಕ್ ಡೌನ್ ?
ಇದೇ ವೇಳೆ ಸರ್ಕಾರ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಪೀಡಿತ ಜಿಲ್ಲೆಗಳೆಂದು ಗುರುತಿಸಿದೆ ಎಂದು ತಿಳಿಸಿದ ಅಶೋಕ್,ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಾಗಿದೆ. ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ವಿಜಯಪುರ, ಧಾರವಾಡ, ಮಂಡ್ಯ ಜಿಲ್ಲೆಗಳು ಗಂಭೀರ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗೆ ಬೇರೆ ಆದೇಶ, ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಿಗೆ ಬೇರೆ ಆದೇಶವನ್ನು ಸಿಎಂ ಸೋಮವಾರ ಸಭೆಯಲ್ಲಿ ನೀಡಲಿದ್ದಾರೆ ಎಂದು ತಿಳಿಸಿದರು.








