ಸಿಎಂ ಸಭೆ ಬಳಿಕ ಅಶೋಕ್ ಮಾತು : ಲಾಕ್ ಡೌನ್ ಬಗ್ಗೆ ಸ್ಪಷ್ಟನೆ
ಬೆಂಗಳೂರು : ಶುಕ್ರವಾರದವರೆಗೂ ರಾಜ್ಯದಲ್ಲಿ ಜಾರಿ ಇರುವ ಯಾವುದೇ ನಿಯಮಗಳಲ್ಲಿ ಬದಲಾವಣೆ ಇಲ್ಲ.
ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ರಿಯಾಯಿತಿ ನೀಡುವ ಕುರಿತು ಶುಕ್ರವಾರ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆಯಿತು.
ಈ ಸಭೆಯ ಬಳಿಕ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಜನವರಿ 25ಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಪೀಕ್ಗೆ ಹೋಗಲಿದೆ, ನಂತರ ಕಡಿಮೆಯಾಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ.
ಹಾಗಾಗಿ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ಬದಲಾವಣೆ ಮಾಡಬೇಕೋ ಬೇಡವೋ ಎನ್ನುವ ಕುರಿತು ನಾನು ಚರ್ಚೆ ಮಾಡಿದ್ದೇನೆ.
ಮುಖ್ಯಮಂತ್ರಿಗಳು ತಜ್ಞರು ನೀಡಿದ ವರದಿ, ಎಲ್ಲರ ಅಭಿಪ್ರಾಯ ಪಡೆದು ಶುಕ್ರವಾರದವರೆಗೂ ಕಾಯೋಣ ಎಂದಿದ್ದಾರೆ.
ಹೀಗಾಗಿ ಸದ್ಯ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದೆ. ಅದು ಮುಂದುವರಿಯಲಿದೆ.
ಶುಕ್ರವಾರದವರೆಗೂ ಕಾದು ನೋಡಿ ಟಫ್ ಗೈಡ್ಲೈನ್ಸ್ಗೆ ವಿನಾಯಿತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅಶೋಕ್, ಶಾಲೆಗಳ ವಿಚಾರದಲ್ಲಿಯೂ ಈಗ ಇರುವ ನಿಯಮವನ್ನೇ ಮುಂದುವರಿಕೆ ಮಾಡಲು ನಿರ್ಧರಿಸಲಾಗಿದೆ.
ಶುಕ್ರವಾರದವರೆಗೂ ಇದೇ ನಿಯಮ ಮುಂದುವರೆಸಲಾಗುತ್ತದೆ ಎಂದರು.









