ಬೆಂಗಳೂರು: ರಾಜ್ಯದಲ್ಲಿ ಮಹಾಮಳೆ ಅವಾಂತರದ ಬಗ್ಗೆ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಳೆಗಾಲದಲ್ಲಿ ಅತೀವೃಷ್ಟಿ ಆಗೋದು ಸಹಜ. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಆಸ್ಪತ್ರೆಯಿಂದಲೇ ಎಲ್ಲಾ ರೀತಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಜನರ ನೆರವಿಗೆ ಈಗಾಗಲೇ ಎನ್ ಡಿ ಆರ್ ಎಫ್ ಪಡೆ ರವಾನಿಸಲಾಗಿದೆ ಎಂದು ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತಾಗಿ ಅಶ್ವತ್ಥ್ ನಾರಾಯಣ್ ಅವರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ವರುಣ ನರ್ತನ ಮುಂದುವರೆದಿದ್ದು, ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಗೆ ನಾನಾ ರೀತಿಯ ಅನಾಹುತಗಳು ಸಂಭವಿಸಿವೆ. ಅದ್ರಲ್ಲೂ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ, ಮರಗಳು ಧರೆಗುರುಳುತ್ತಿರುವಂತಹ ಅನಾಹುತಗಳು ಸಾಮಾನ್ಯವಾಗಿವೆ. ಇದರಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿತ್ತು, ಜನರನ್ನು ಆತಂಕ್ಕೀಡು ಮಾಡಿದೆ. ಇನ್ನೂ ಕೆಲವೆಡೆ ನದಿಗಳು ಮೈದುಂಬಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆಯಾಗಿದೆ. ಪರಿಣಾಮ ಅನೇಕ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿ ಜನರು ಪರದಾಡುವಂತಾಗಿದೆ.








