ಶತಮಾನದ ದಾಖಲೆ ಬರೆದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್…
ಅದು ಚೆನ್ನೈ ಟೆಸ್ಟ್ ಪಂದ್ಯ. ಲಂಚ್ ಬ್ರೇಕ್ ಗೆ ಎರಡು ಓವರ್ ಗಳಿದ್ದವು. ಅಷ್ಟರಲ್ಲಿ ಇಂಗ್ಲೆಂಡ್ ನ 578 ರನ್ ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ 337 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಆದ್ರೆ ಟೀಮ್ ಇಂಡಿಯಾ ಫಾಲೋ ಆನ್ ಗೆ ಸಿಲುಕಿದ್ರೂ ಇಂಗ್ಲೆಂಡ್ ಫಾಲೋ ಆನ್ ಹೇರಲಿಲ್ಲ. 241 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಲು ಇಂಗ್ಲೆಂಡ್ ತಂಡ ಯೋಜನೆಯನ್ನು ಹಾಕಿಕೊಂಡಿತ್ತು.
ಹೌದು, ದಿನಾಂಕ ಫೆಬ್ರವರಿ 8, 2021. ಸಮಯ ಬೆಳಗ್ಗೆ 11 ಗಂಟೆ 14 ನಿಮಿಷ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕರಾದ ರೋರಿ ಬನ್ರ್ಸ್ ಮತ್ತು ಡಾಮ್ನಿನಿಕ್ ಸಿಬ್ಲೆ ಪಕ್ಕಾ ಗೇಮ್ ಪ್ಲಾನ್ ಮಾಡಿಕೊಂಡು ಕ್ರೀಸ್ ಗೆ ಆಗಮಿಸಿದ್ದರು.
ಆಗಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ಅಚ್ಚರಿಗೊಳಿಸುವಂತಹ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಇಂಗ್ಲೆಂಡ್ ನ ಆರಂಭಿಕರು ತಮಗೆ ಜಸ್ಪ್ರಿತ್ ಬೂಮ್ರಾ ಅಥವಾ ಇಶಾಂತ್ ಶರ್ಮಾ ಮೊದಲ ಓವರ್ ಅನ್ನು ಎಸೆಯುತ್ತಾರೆ ಅಂತ ಅಂದುಕೊಂಡಿದ್ದರು.
ಆದ್ರೆ ವಿರಾಟ್ ಕೊಹ್ಲಿ ಪ್ಲಾನ್ ಬೇರೆಯಾಗಿತ್ತು. ಆ ಪ್ಲಾನ್ ಏನು ಎಂಬುದು ಟೀಮ್ ಇಂಡಿಯಾ ಆಟಗಾರರಿಗೆ ತಿಳಿದಿರಲಿಲ್ಲ. ಮೊದಲ ಓವರ್ ಅನ್ನು ಎಸೆಯಲು ಅಶ್ವಿನ್ ಗೆ ನೀಡಿದಾಗ ಸ್ವತಃ ಅಶ್ವಿನ್ ಗೂ ಅಚ್ಚರಿಯಾಗಿತ್ತು. ಯಾಕಂದ್ರೆ ಅಶ್ವಿನ್ ಅವರು ಕೂಡ ಮೊದಲ ಓವರ್ ಅನ್ನು ಇಶಾಂತ್ ಶರ್ಮಾ ಎಸೆಯುತ್ತಾರೆ ಅಂತ ಅಂದುಕೊಂಡಿದ್ದರು.
ಆದ್ರೆ ವಿರಾಟ್ ಕೊಹ್ಲಿ ಅಶ್ವಿನ್ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕೂಡ ಅಶ್ವಿನ್ ಗೆ ಸವಾಲಾಗಿತ್ತು.
ಹಾಗೇ ಮೊದಲ ಓವರ್ ನ ಮೊದಲ ಎಸೆತದಲ್ಲೇ ಅಶ್ವಿನ್ ಗೆ ವಿಕೆಟ್ ಕೂಡ ಸಿಕ್ಕಿತ್ತು. ಅಶ್ವಿನ್ ಅವರ ಸ್ಪಿನ್ ಎಸೆತ ಹೆಚ್ಚುವರಿಯಾಗಿ ಬೌನ್ಸ್ ಆದಾಗ ರೊರಿ ಬನ್ಸ್ ಅವರ ಬ್ಯಾಟ್ ಗೆ ತಾಗಿದ ಚೆಂಡು ಸ್ಲಿಪ್ ನಲ್ಲಿದ್ದ ಅಜಿಂಕ್ಯಾ ರಹಾನೆ ಕೈ ಸೇರಿಕೊಂಡಿತ್ತು.
ಅಷ್ಟೇ.. ಇಂಗ್ಲೆಂಡ್ ಗೆ ಆಘಾತ…ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಶತಮಾನದ ದಾಖಲೆಯ ಬೌಲರ್ ಆಗಿ ಹೊರಹೊಮ್ಮಿದ್ರು.
ಹೌದು ಟೆಸ್ಟ್ ಕ್ರಿಕೆಟ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ವಿಶ್ವದ ಮೂರನೇ ಸ್ಪಿನ್ನರ್ ಎಂಬ ಹೆಗ್ಗಳಕೆಗೆ ಅಶ್ವಿನ್ ಪಾತ್ರರಾದ್ರು.
ಈ ಹಿಂದೆ 1888ರ ಆಶಷ್ ಸರಣಿಯಲ್ಲಿ ಯಾರ್ಕ್ ಶೈರ್ ನ ಸ್ಪಿನ್ನರ್ ಬಾಬಿ ಪೀಲ್ ಅವರು ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ರು. ಆದಾದ ನಂತರ 1907ರಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೊಲ್ಗರ್ ಅವರು ಇಂಗ್ಲೆಂಡ್ ನ ಟಾಮ್ ಹೈವಾರ್ಡ್ ಅವರನ್ನು ಔಟ್ ಮಾಡಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ ಅಶ್ವಿನ್ ಅವರು ಈ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ರನ್ ದಾಹಕ್ಕೆ ಬ್ರೇಕ್ ಹಾಕಿದ್ದ ಆರ್. ಅಶ್ವಿನ್ ಅವರು ಎರಡನೇ ಇನಿಂಗ್ಸ್ ನಲ್ಲಿ ಆರು ವಿಕೆಟ್ ಉರುಳಿಸಿದ್ದರು. ಒಟ್ಟಾರೆ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 9 ವಿಕೆಟ್ ಪಡೆದುಕೊಂಡ್ರು. ಅಲ್ಲದೆ 28 ಬಾರಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು. ಈ ಮೂಲಕ ತನ್ನ ಟೆಸ್ಟ್ ಕ್ರಿಕೆಟ್ ನ ವಿಕೆಟ್ ಗಳ ಸಂಖ್ಯೆಯನ್ನು 386ಕ್ಕೇರಿಸಿಕೊಂಡಿದ್ದಾರೆ. ಅಂದ ಹಾಗೇ ಅಶ್ವಿನ್ 75ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 578 ರನ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 178 ರನ್ ಗಳನ್ನು ಕಲೆ ಹಾಕಿತ್ತು.
ಹಾಗೇ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 337 ರನ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ನಾಲ್ಕನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ಟೀಮ್ ಇಂಡಿಯಾಗೆ ಗೆಲ್ಲಲು 420 ರನ್ ಗಳ ಟಾರ್ಗೆಟ್ ಇದೆ. ಐದನೇ ದಿನ 381 ರನ್ ಗಳ ಅವಶ್ಯಕತೆ ಇದೆ.