ಇಂಗ್ಲೆಂಡ್ ಗೆ ಕಂಟಕವಾಗಲಿರುವ ಸ್ಪಿನ್ ಮಾಂತ್ರಿಕ ಅಶ್ವಿನ್….!
ಆರ್. ಅಶ್ವಿನ್.. ಟೀಮ್ ಇಂಡಿಯಾದ ಹಿರಿಯ ಹಾಗೂ ಅನುಭವಿ ಸ್ಪಿನ್ ಮಾಂತ್ರಿಕ. ಕಳೆದ ಆಸ್ಟ್ರೇಲಿಯಾ ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಶ್ವಿನ್ ಅವರು ಸದ್ಯ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲೂ ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡುತ್ತಾರೆ ಅನ್ನೋ ನಿರೀಕ್ಷೆಗಳು ಸಹಜ.
ಅದೇ ರೀತಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಹೇಳಿಕೊಳ್ಳುವಂತಹ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನ್ನಿಸಿಲ್ಲ. ಆದ್ರೂ ಮೊದಲ ಇನಿಂಗ್ಸ್ ನಲ್ಲಿ 55.1 ಓವರ್ ಗಳಲ್ಲಿ 5 ಮೇಡನ್ ಓವರ್ ನೊಂದಿಗೆ 146 ರನ್ ನೀಡಿ ಮೂರು ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಈ ನಡುವೆ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಾರಕವಾಗಿ ಪರಿಣಮಿಸಬಹುದು ಅನ್ನೋದನ್ನು ಈ ಹಿಂದಿನ ಅಂಕಿ ಅಂಶಗಳು ಹೇಳ್ತಾವೆ.
ಸ್ಪಿನ್ ಜಾದೂ ಜೊತೆ ಬ್ಯಾಟಿಂಗ್ ನಲ್ಲೂ ಅಶ್ವಿನ್ ಮಿಂಚು ಹರಿಸುತ್ತಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧ ಅಶ್ವಿನ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ಬ್ಯಾಟಿಂಗ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅಶ್ವಿನ್ 9 ಪಂದ್ಯಗಳನ್ನು ಆಡಿದ್ದು, 549 ರನ್ ಕಲೆ ಹಾಕಿದ್ದಾರೆ. 49.90ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅಶ್ವಿನ್ ಆರು ಅರ್ಧಶತಗಳನ್ನು ದಾಖಲಿಸಿದ್ದಾರೆ. ಅಜೇಯ 91 ರನ್ ಗರಿಷ್ಠ ಸ್ಕೋರ್ ಆಗಿದೆ. ಅಷ್ಟೇ ಅಲ್ಲ, ಸದ್ಯದ ಆಟಗಾರರ ಪೈಕಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್ ದಾಖಲಿಸಿರುವ ಭಾರತದ ಮೂರನೇ ಆಟಗಾರ.
ಇನ್ನು ಬೌಲಿಂಗ್ ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 42 ವಿಕೆಟ್ ಗಳನ್ನು ಪಡೆದಿದ್ದಾರೆ. ಸರಾಸರಿ 37.71. 55ಕ್ಕೆ ಆರು ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಮೂರು ಬಾರಿ ಐದು ವಿಕೆಟ್ ಪಡೆದಿದ್ದು, ಒಂದು ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ (ಎರಡು ಇನಿಂಗ್ಸ್ ಸೇರಿ). ಎರಡು ಇನಿಂಗ್ಸ್ ಗಳಲ್ಲಿ 167ಕ್ಕೆ 12 ವಿಕೆಟ್ ಪಡೆದಿರುವ ಸಾಧನೆಯೂ ಅಶ್ವಿನ್ ಹೆಸರಿನಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಗೌರವ ಕೂಡ ಅಶ್ವಿನ್ ಗಿದೆ.
ಒಟ್ಟಿನಲ್ಲಿ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.








