ಮಂಗಳೂರು : ಕೊರೊನಾ ವೈರಸ್ ನಿಂದಾಗಿ ಇಡಿ ವಿಶ್ವವೇ ಲಾಕ್ ಡೌನ್ ಆಗಿತ್ತು. ಹಾಗಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಏರ್ ಇಂಡಿಯಾದ ವಂದೇ ಭಾರತ್ ಮಿಷನ್ ನಲ್ಲಿ ಕನ್ನಡತಿ ಅಶ್ವಿನಿ ಪೂಜಾರಿ ಭಾಗಿಯಾಗಿದ್ದರು. ಇದು ಕರುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಏರ್ ಇಂಡಿಯಾದಲ್ಲಿ ಗಗನಸಖಿ ಅಗಿರೋ ಮಂಗಳೂರಿನ ಅಶ್ವಿನಿ ಪೂಜಾರಿ ವಂದೇ ಭಾರತ್ ಮಿಷನ್ ನಲ್ಲಿ ಪಾಲ್ಗೊಂಡು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಆದರೆ ಕೆಲವರು ಅದು ಅವರ ಕೆಲಸ ಎಂದು ಸಾಮಾಜಿಕ ತಾಣಗಳಲ್ಲಿ ಟೀಕಿಸಿದ್ದರು. ಅಂತವರಿಗೆ ಖಡಕ್ ಉತ್ತರ ನೀಡಿದ ಅಶ್ವಿನಿ, ಏರ್ ಇಂಡಿಯಾ ವಂದೇ ಭಾರತ್ ಮಿಷನ್ ನಲ್ಲಿ ನಮ್ಮ ಸ್ವ ಇಚ್ಛೆಯಿಂದ ಭಾಗವಹಿಸಿದ್ದೇನೆ. ಅಲ್ಲಿ ನಮ್ಮ ಜೀವಕ್ಕೆ ಏನೇ ಆದರೂ ನಾವೇ ಜವಾಬ್ದಾರರು. ವಿಮಾನ ಹೊರಡೋ ಮುನ್ನ ಮತ್ತು ಬಂದ ನಂತರ ಹೀಗೆ ಮೂರ್ನಾಲ್ಕು ಬಾರಿ ಟೆಸ್ಟ್ ಇರುತ್ತವೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಪಿಪಿಇ ಕಿಟ್ ಹಾಕಿಕೊಂಡೇ ಇರಬೇಕು. ಊಟ, ನೀರು ಯಾವುದೂ ಇಲ್ಲದೇ ಸುದೀರ್ಘ ಅವಧಿಯ ಪ್ರಯಾಣ ಮಾಡಿದ್ದೇವೆ. ವಾಶ್ ರೂಂಗೆ ಹೋಗುವುದಕ್ಕೂ ಅವಕಾಶ ಇಲ್ಲದ ಸ್ಥಿತಿಯಲ್ಲಿರುತ್ತೇವೆ. ಆದರೂ ಅಲ್ಲಿನ ನಮ್ಮವರಿಗಾಗಿ ಕೆಲಸ ಮಾಡುತ್ತೇವೆ. ಇದಕ್ಕೆ ನಮಗೆ ಏರ್ ಇಂಡಿಯಾ ಹೆಚ್ಚು ಸಂಬಳ ಏನೂ ಕೊಡಲ್ಲ ಎಂದು ಹೇಳಿದ್ದಾರೆ.








