Asia Cup: ಬಾಂಗ್ಲಾ ವಿರುದ್ಧ ಶತಕ ಸಿಡಿಸಿ ಹಲವು ಮೈಲುಗಲ್ಲು ದಾಟಿದ ಶುಭ್ಮನ್ ಗಿಲ್
ಏಷ್ಯಾಕಪ್-2023 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ತಮ್ಮ ಈ ಅಮೋಘ ಶತಕದ ಮೂಲಕ ಹಲವು ಮೈಲುಗಲ್ಲುಗಳನ್ನ ದಾಟಿದ್ದಾರೆ.
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು, 133 ಬಾಲ್‌ಗಳಲ್ಲಿ 8 ಬೌಂಡರಿ, 5 ಸಿಕ್ಸರ್ ನೆರವಿನಿಂದ 121 ರನ್‌ಗಳಿಸಿದ ಗಿಲ್, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ದಾಖಲಿಸಿದರು. ಶುಭ್ಮನ್ ಗಿಲ್ ಅವರ ಶತಕದ ನಡುವೆಯೂ ಭಾರತ 6 ರನ್‌ಗಳ ಸೋಲಿನ ಆಘಾತ ಅನುಭವಿಸಿತು.
ಆದರೆ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಈಗಾಗಲೇ ʼಭಾರತೀಯ ಕ್ರಿಕೆಟ್‌ನ ಹೊಸ ರಾಜಕುಮಾರʼ ಎಂಬ ಹೆಗ್ಗಳಿಕ ಪಡೆದಿರುವ ಶುಭ್ಮನ್ ಗಿಲ್, ಬಾಂಗ್ಲಾದೇಶ ವಿರುದ್ಧ ಬಾರಿಸಿದ ಶತಕದೊಂದಿಗೆ ಹಲವು ಮೈಲುಗಲ್ಲುಗಳನ್ನ ದಾಟಿದ್ದಾರೆ. 2023ರಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿರುವ ಗಿಲ್, ಆ ಮೂಲಕ ಪ್ರಸಕ್ತ ವರ್ಷದಲ್ಲಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿದರು. ಇದಲ್ಲದೇ 2023ರಲ್ಲಿ ಹೆಚ್ಚು 50+ ರನ್‌ಗಳಿಸಿರುವ ಆಟಗಾರನಾಗಿಯೂ ಗಿಲ್ ಗುರುತಿಸಿಕೊಂಡಿದ್ದಾರೆ.
ಇನ್ನೂ ಈ ಶತಕದ ಮೂಲಕ ಏಷ್ಯಾಕಪ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಗಿಲ್, ಈ ಬಾರಿಯ ಏಷ್ಯಾಕಪ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಲ್ಲದೇ ಪ್ರಸಕ್ತ ವರ್ಷದಲ್ಲಿ ವೇಗವಾಗಿ 1500 ರನ್‌ಗಳಿಸಿದ ಹೆಗ್ಗಳಿಕೆ ಪಡೆದಿರುವ ಶುಭ್ಮನ್ ಗಿಲ್, 60+ ಸರಾಸರಿ ಮತ್ತು 100+ ಸ್ಟ್ರೈಕ್ ರೇಟ್ ಹೊಂದಿರುವ ಏಕೈಕ ಬ್ಯಾಟರ್ ಎನಿಸಿದ್ದಾರೆ.
2023ರ ಆರಂಭದಿಂದಲೇ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಶುಭ್ಮನ್ ಗಿಲ್, ಆಡಿರುವ 32 ಏಕದಿನ ಪಂದ್ಯಗಳಲ್ಲಿ 5 ಶತಕ ಹಾಗೂ 8 ಅರ್ಧಶತಕಗಳನ್ನ ದಾಖಲಿಸಿದ್ದಾರೆ.








