Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ…
Asia Cup: India overtook Pakistan team in ODI ranking…
ಏಷ್ಯಾಕಪ್-2023 ಟೂರ್ನಿಯ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತ, ಇದೀಗ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದೆ.
ಪ್ರಸಕ್ತ ಏಷ್ಯಾಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮ ಸಾರಥ್ಯದ ಟೀಂ ಇಂಡಿಯಾ ಗೆಲುವಿನ ಅಲೆಯಲ್ಲಿದ್ದು, ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಹೀಗಾಗಿಯೇ ಐಸಿಸಿ ಏಕದಿನ ಕ್ರಿಕೆಟ್
ರ‍್ಯಾಂಕಿಂಗ್‌ನಲ್ಲಿ 116 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಭಾರತ, 2ನೇ ಸ್ಥಾನಕ್ಕೇರಿದ್ದು, ಭಾರತಕ್ಕಿಂತ ಎರಡು ಅಂಕ ಮುಂದಿರುವ ಆಸ್ಟ್ರೇಲಿಯಾ ನಂ.1 ತಂಡವಾಗಿ ಕಾಣಿಸಿಕೊಂಡಿದೆ.
ಆದರೆ ಏಷ್ಯಾಕಪ್ ಆರಂಭಕ್ಕೂ ಮುನ್ನ ನಂ.1 ತಂಡವಾಗಿದ್ದ ಪಾಕಿಸ್ತಾನ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಸೂಪರ್-4ನ ಪಂದ್ಯಗಳಲ್ಲಿ ಭಾರತದ ವಿರುದ್ಧ ಭಾರೀ ಅಂತರದ ಸೋಲು ಕಂಡಿದ್ದ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಕೂಡ ಸೋಲಿನ ಆಘಾತ ಅನುಭವಿಸಿದೆ. ಈ ಸೋಲಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಬಾಬರ್ ಆಜ಼ಂ ಸಾರಥ್ಯದ ಪಾಕ್ ತಂಡ, ಇದೀಗ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.
ನಂ.1 ಸ್ಥಾನಕ್ಕೆ ಫೈಟ್:
ಈ ನಡುವೆ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪೈಪೋಟಿ ಏರ್ಪಟ್ಟಿದೆ. ಸದ್ಯ 118 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಆಸೀಸ್, ನಂ.1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, 116 ರೇಟಿಂಗ್ಸ್‌ನೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. ಹೀಗಾಗಿ ಸೆ.17ರಂದು ನಡೆಯುವ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ ಮೊದಲ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ, ಸರಣಿಯ ಅಂತಿಮ 2 ಪಂದ್ಯಗಳಲ್ಲಿ ಸೋತರೆ ಭಾರತಕ್ಕೆ ನಂ.1 ಸ್ಥಾನ ಲಭಿಸಲಿದೆ.








