ಬೆಂಗಳೂರು: ವ್ಯಕ್ತಿಯೊಬ್ಬ ಶೀಲ ಶಂಕಿಸಿ ಪತ್ನಿ (Wife) ಹಾಗೂ ಅತ್ತೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ
ಈ ಘಟನೆ ಇಲ್ಲಿಯ ಬನಶಂಕರಿಯಲ್ಲಿ ನಡೆದಿದೆ. ಆಸೀಫ್ ದಾಳಿ ನಡೆಸಿರುವ ಪಾಪಿ ಅಳಿಯ. ತಲ್ವಾರ್ ನಿಂದ ಅತ್ತೆ ಹಾಗೂ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಸೀಫ್ ತನ್ನ ಪತ್ನಿ ಹೀನಾ ಕೌಸರ್ (25) ಅತ್ತೆ ಫರ್ವಿನ್ ತಾಜ್ ಮೇಲೆ ದಾಳಿ ನಡೆಸಿದ್ದಾನೆ.
10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಲಾಗಿತ್ತು. ಈ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಆದರೆ, ಆಸೀಫ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಪತ್ನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಕಾಲೇಜು ಸ್ನೇಹಿತರಿಗೆ ಪತ್ನಿ ಮಾಡಿದ್ದ ಮೆಸೇಜ್ ನೋಡಿ ಅಕ್ರಮ ಸಂಬಂಧ ಇದೆ ಎಂದು ಕಿರುಕುಳ ನೀಡುತ್ತಿದ್ದ. ಹೀಗಾಗಿ ಇತ್ತೀಚೆಗೆ ಪತ್ನಿ ಮಗಳೊಂದಿಗೆ ತವರು ಮನೆಗೆ ಸೇರಿದ್ದಳು. ಪತ್ನಿಯ ಶೀಲ ಶಂಕಿಸಿ ಅತ್ತೆ ಮನೆಗೆ ಬಂದು ಮೂರು ಬಾರಿ ಹಲ್ಲೆ ಯತ್ನ ನಡೆಸಿದ್ದ. ಹೀಗೆ ಜ.14 ರಂದು ಅತ್ತೆ ಇಲ್ಲದಿದ್ದಾಗ ಏಕಾಏಕಿ ಮನೆಗೆ ನುಗ್ಗಿ ತಲ್ವಾರ್ ಮೂಲಕ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಆನಂತರ ಮನೆಗೆ ಬಂದ ಅತ್ತೆಯ ಮೇಲೂ ದಾಳಿ ನಡೆಸಿದ್ದಾನೆ. ಅಕ್ಕಪಕ್ಕದವರು ಬರುತ್ತಿದ್ದಂತೆ ತಲ್ವಾರ್ ಬಿಟ್ಟು ಓಡಿ ಹೋಗಿದ್ದಾನೆ. ಗಾಯಗೊಂಡಿದ್ದ ಮಗಳು ಹಾಗೂ ತಾಯಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.








