ಮೈಸೂರು: ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ. ಮೂಡಲಕೊಪ್ಪಲು ನಿವಾಸಿ ನಾಗೇಶ್ ಸಾಲ ಕೊಟ್ಟು, ನಂತರ ಹಲ್ಲೆಗೊಳಗಾದ ವ್ಯಕ್ತಿ. ಜಯಣ್ಣ, ಸುದೀಪ್ ಹಾಗೂ ಲೋಕೇಶ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗೇಶ್ ಎಂಬುವರಿಂದ ಕಾಡನಕೊಪ್ಪಲಿನ ಜಯಣ್ಣ ಎಂಬಾತ 25 ಸಾವಿರ ರೂ.ಹಣ ಸಾಲ ಪಡೆದಿದ್ದ. ಆನಂತರ 15 ಸಾವಿರ ರೂ. ಹಣ ಮರಳಿ ನೀಡಿದ್ದ. ಇನ್ನೂ 10 ಸಾವಿರ ಹಣ ನೀಡಬೇಕಿತ್ತು. ಆದರೆ, ಉಳಿದ ಹಣ ನೀಡುವಂತೆ ಹಲವು ಬಾರಿ ಕೇಳಿದರೂ ಮರಳಿ ನೀಡಿರಲಿಲ್ಲ.
ಗ್ರಾಮದ ಬಾರ್ ಹತ್ತಿರ ಜಯಣ್ಣ ಸಿಕ್ಕಾಗ ಬಾಕಿ ಹಣವನ್ನು ನಾಗೇಶ್ ಕೇಳಿದ್ದಾರೆ. ಈ ಸಂದರ್ಭದಲ್ಲಿ ಜಯಣ್ಣ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಗಾಯಾಳು ನಾಗೇಶ್ ಪುತ್ರ ಅಭಿಷೇಕ್ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








