ಸರಕಾರಿ ವೈದ್ಯರಿಗೆ ದಿನಕ್ಕೆ 3 ಬಾರಿ ಹಾಜರಾತಿ ಕಡ್ಡಾಯ Saaksha Tv
ಬೆಂಗಳೂರು: ಇನ್ನೂ ಮುಂದೆ ಸರಕಾರಿ ವೈದ್ಯರಿಗೆ ದಿನಕ್ಕೆ ಮೂರು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕೆಲವು ಜಿಲ್ಲೆಗಳಲ್ಲಿ ವೈದ್ಯರು ಹಾಜರಾತಿ ಹಾಕಿ ನಂತರ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ, ಪೂರ್ತಿ ಕರ್ತವ್ಯ ನಿರ್ವಹಿಸದೇ ಇರುವ ಬಗ್ಗೆ ಇಲಾಖೆಗೆ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ವೈದ್ಯರು ಕರ್ತವ್ಯದ ಅವಧಿಯಲ್ಲಿ ಪೂರ್ತಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಂಸ್ಥೆ, ಮಹಾವಿದ್ಯಾಲಯ, ಕಾಲೇಜುಗಳ ವೈದ್ಯರಿಗೆ ದಿನದಲ್ಲಿ 3 ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಲಾಗಿದೆ.
ತಮ್ಮ ಕೆಲಸದ ಅವಧಿಯಲ್ಲಿ ಬೇರೆ ಕಡೆಗಳಿಗೆ ಹೋಗಿ ಕೆಲಸ ಮಾಡುತ್ತಿರುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇರುವುದಿಲ್ಲ ಎಂದು ಅನೇಕ ಆರೋಪಗಳು ಕೇಳಿ ಬಂದಿತ್ತು. ಸದ್ಯ ಈಗ ಇದಕ್ಕೆ ಕಡಿವಾಣ ಹಾಕಲು ವೈದ್ಯಕೀಯ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆಡಳಿತ ಪಕ್ಷದ ಶಾಸಕರು ನೇರಾ ನೇರ ದೂರು ಸಲ್ಲಿಸಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಕೆಲವು ಶಾಸಕರಿಂದ ವೈದ್ಯರ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ದಿನಕ್ಕೆ ಮೂರು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.









