ಬೆಂಗಳೂರು: ಹಳ್ಳಿ ಫೈಟ್ ಎಂದೇ ಖ್ಯಾತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಇನ್ನೂ ಕೇವಲ 12 ದಿನಗಳು ಮಾತ್ರ ಬಾಕಿ ಇದೆ. ಡಿ .22 ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೋಮವಾರದಿಂದಲೇ ಆರಂಭವಾಗಿದೆ. ಹಳ್ಳಿಗಳಲ್ಲಿ ಚುನಾವಣಾ ಕಾವು ಏರುತ್ತಿರುವಾಗಲೇ ಲಕ್ಷ ಲಕ್ಷ ಹಣಕ್ಕೆ ಗ್ರಾಮಸ್ಥರೇ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.
ಗ್ರಾಪಂ ಸ್ಥಾನಗಳಿಗೆ ಹರಾಜು ನಡೆದ ಬಗ್ಗೆ ವಿಡಿಯೋ ವೈರಲ್ ಆದ ಕಡೆಗಳಲ್ಲಿ ಮಾತ್ರ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಹಲವೆಡೆ ಗುಟ್ಟಾಗಿಯೇ ಹರಾಜು ನಡೆಸಿ ಅವಿರೋಧ ಆಯ್ಕೆಗೆ ಕಸರತ್ತು ನಡೆದಿದೆ. ಇದಕ್ಕೆ ಕಡಿವಾಣ ಹಾಕುವ ಯಾವುದೇ ಪ್ರಯತ್ನ ಸರ್ಕಾರದ ಕಡೆಯಿಂದ ನಡೆದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನಿಲೋಗಲ್ ಗ್ರಾಮದಲ್ಲಿ ಕೂಡ ಇದೇ ರೀತಿಯ ಗ್ರಾಮ ಪಂಚಾಯಿತಿ ಸ್ಥಾನಗಳು ಹರಾಜು ಕೂಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾ.ಪಂ ಸದಸ್ಯರ ಸ್ಥಾನಗಳು ಆರ್ಥಿಕವಾಗಿ ಶ್ರೀಮಂತರಾದವರ ಪಾಲಾಗುತ್ತಿವೆ.
1ನೇ ವಾರ್ಡ್ ಮಹಿಳೆ(ಎಸ್ಟಿ): 4.60 ಲಕ್ಷ ರೂ.
2ನೇ ವಾರ್ಡ್ ಮಹಿಳೆ(ಎಸ್ಟಿ): 4.35 ಲಕ್ಷ ರೂ.
3ನೇ ವಾರ್ಡ್ ಪುರುಷ(ಎಸ್ಟಿ): 5.10 ಲಕ್ಷ ರೂ.
ಈ ಘಟನೆಗಳಿಗೆ ಕಡಿವಾಣ ಹಾಕಲು ರಾಜ್ಯ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.
ಗ್ರಾ.ಪಂ ಸದಸ್ಯ ಸ್ಥಾನವನ್ನು ಹರಾಜು ಹಾಕುವವರ ವಿರುದ್ಧ ರಾಜ್ಯಾದ್ಯಂತ ಕೆಲವು ಕಡೆ ಎಫ್ಐಆರ್ ಕೂಡ ದಾಖಲಾಗಿದೆ. ರಾಜ್ಯಾದ್ಯಂತ ಅವಿರೋಧವಾಗಿ ಆಯ್ಕೆ ಮಾಡುತ್ತಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಗಮನಕ್ಕೂ ಬಂದಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಆಗಿರುವ ಬಸವರಾಜ್ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಹರಾಜು ಹಾಕಿ ಸದಸ್ಯತ್ವ ಪಡೆಯುವುದು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೃತ್ಯವಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧ. ಚುನಾವಣೆಗಳನ್ನು ನಡೆಸಬೇಕು. ಸೋಲು, ಗೆಲುವು ಬೇರೆ ಆದ್ದರಿಂದಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಚುನಾವಣೆ ಮೂಲಕ ಆಯ್ಕೆ ಆಗಬೇಕಾಗಿರುವ ಕಡೆ ಹರಾಜು ಹಾಕುವುದು ಕಾನೂನು ವಿರೋಧವಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel