ಸಿಡ್ನಿ ಟೆಸ್ಟ್ – ಅಸ್ಟ್ರೇಲಿಯಾಗೆ ದಿಟ್ಟ ಉತ್ತರ ನೀಡುತ್ತಾ ಟೀಮ್ ಇಂಡಿಯಾ ..!
ಸ್ಟೀವ್ ಸ್ಮಿತ್ ಅವರ ಅಮೋಘ ಶತಕದ ನಡುವೆಯೂ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಟೀಮ್ ಇಂಡಿಯಾ ದಿಟ್ಟ ಉತ್ತರವನ್ನು ನೀಡುತ್ತಿದೆ.
ಆಸ್ಟ್ರೇಲಿಯಾದ 338 ರನ್ ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ ಎರಡನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆ ಪಡೆಯಲು ಟೀಮ್ ಇಂಡಿಯಾಗೆ ಇನ್ನೂ 242 ರನ್ ಬೇಕಾಗಿದೆ.
ಟೀಮ್ ಇಂಡಿಯಾ ಪರ ಶುಬ್ಮನ್ ಗಿಲ್ ಆಕರ್ಷಕ 50 ರನ್ ಗಳಿಸಿ ಔಟಾದ್ರೆ, ರೋಹಿತ್ ಶರ್ಮಾ 26 ರನ್ ಗೆ ಹೋರಾಟವನ್ನು ಮುಗಿಸಿದ್ರು. ಮೂರನೇ ದಿನಕ್ಕೆ ನಾಯಕ ಅಜಿಂಕ್ಯಾ ರಹಾನೆ ಅಜೇಯ 5 ರನ್ ಹಾಗೂ ಚೇತೇಶ್ವರ ಪೂಜಾರ ಅಜೇಯ 9 ರನ್ ಗಳೊಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಮನಮೋಹಕ 131 ರನ್ ಹಾಗೂ ಮಾರ್ನಸ್ ಲಾಬುಸ್ಚೆಂಗ್ನೆ 91 ರನ್ ಗಳ ಸಹಾಯದಿಂದ 338 ರನ್ ಪೇರಿಸಿತ್ತು.
ಸ್ಟೀವ್ ಸ್ಮಿತ್ 226 ಎಸೆತಗಳಲ್ಲಿ 16 ಬೌಂಡರಿಗಳ ಸಹಾಯದಿಂದ 131 ರನ್ ಗಳಿಸಿದ್ರು. ಅಲ್ಲದೆ ರವೀಂದ್ರ ಜಡೇಜಾ ಅವರ ಅದ್ಭುತ ಫೀಲ್ಡಿಂಗ್ ಗೆ ಬಲಿಯಾದ್ರು.
ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ 62ಕ್ಕೆ 4 ವಿಕೆಟ್ ಉರುಳಿಸಿ ಆಸ್ಟ್ರೇಲಿಯನ್ನರ ರನ್ ದಾಹಕ್ಕೆ ಕಡಿವಾಣ ಹಾಕಿದ್ರು. ಇನ್ನುಳಿದಂತೆ ಜಸ್ಪ್ರಿತ್ ಬೂಮ್ರಾ ಹಾಗೂ ನವದೀಪ್ ಸೈನಿ ಎರಡು ವಿಕೆಟ್ ಪಡೆದ್ರೆ, ಮಹಮ್ಮದ್ ಸಿರಾಜ್ ಒಂದು ವಿಕೆಟ್ ಉರುಳಿಸಿದ್ರು.