ಮೆಲ್ಬರ್ನ್ ನಲ್ಲಿ ಆಜಿಂಕ್ಯಾ ರಹಾನೆಯ ಶತಕದ ಆಲಾಪನೆ..!
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸುವ ಸೂಚನೆ ನೀಡಿದೆ.
ನಾಯಕ ಅಜಿಂಕ್ಯಾ ರಹಾನೆ ಅವರ ಅಜೇಯ ಶತಕದ ನೆರವನ್ನು ಪಡೆದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಮೊದಲ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಎರಡನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಐದು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ರಹಾನೆ ಅಜೇಯ 104 ರನ್ ಗಳಿಸಿದ್ರೆ, ರವೀಂದ್ರ ಜಡೇಜಾ ಅಜೇಯ 40 ರನ್ ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾ 82 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
36 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಎರಡನೇ ದಿನ ಶುಬ್ಮನ್ ಗಿಲ್ ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ಗಿಲ್ ಬಿರುಸಿನ ಆಟವನ್ನಾಡುವ ಸೂಚನೆ ನೀಡಿದ್ರು. ಆದ್ರೆ 65 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 45 ರನ್ ಗಳಿಸಿದ್ರು. ಹಾಗೇ ಚೇತೇಶ್ವರ ಪೂಜಾರ 17 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಬಳಿಕ ನಾಯಕ ರಹಾನೆ ಮತ್ತು ಹನುಮ ವಿಹಾರಿ ತಂಡಕ್ಕೆ ಚೇತರಿಕೆ ನೀಡಲು ಮುಂದಾದ್ರು. ರಹಾನೆ ತಾಳ್ಮೆಯ ಆಟವನ್ನಾಡಿದ್ರು. ಇನ್ನೊಂದೆಡೆ ಹನುಮ ವಿಹಾರಿ 21 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 52 ರನ್ ಕಲೆ ಹಾಕಿದ್ದರು.
ಆ ನಂತರ ರಹಾನೆ ಅವರನ್ನು ಜೊತೆಗೂಡಿದ ರಿಷಬ್ ಪಂತ್ ಕೂಡ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ರು. ಆದ್ರೆ 29 ರನ್ ಗಳಿಸುವಷ್ಟರಲ್ಲಿ ರಿಷಬ್ ಪಂತ್ ತಾಳ್ಮೆಯನ್ನು ಕಳೆದುಕೊಂಡ್ರು. ಆದ್ರೂ ಐದನೇ ವಿಕೆಟ್ಗೆ ಅಮೂಲ್ಯ 57 ರನ್ ಕಲೆ ಹಾಕಿದ್ದರು.
ಈ ಹಂತದಲ್ಲಿ ಕ್ರೀಸ್ ಗೆ ಅಂಟಿಕೊಂಡಿದ್ದ ರಹಾನೆ ಅವರಿಗೆ ಸಾಥ್ ನೀಡಿದ್ದು ರವೀಂದ್ರ ಜಡೇಜಾ. ಆರನೇ ವಿಕೆಟ್ ಗೆ ಅಜೇಯ 104 ರನ್ ಕಲೆ ಹಾಕುವ ಮೂಲಕ ಆಸಿಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ್ರು.
ಇನ್ನೊಂದೆಡೆ ಆಕರ್ಷಕ ಹಾಗೂ ನಾಯಕನ ಆಟವನ್ನಾಡಿದ್ದ ಅಜಿಂಕ್ಯಾ ರಹಾನೆ ಅವರು ಶತಕದ ಸಂಭ್ರಮದಲ್ಲೂ ತೇಲಾಡಿದ್ರು. ರಹಾನೆ ಟೆಸ್ಟ್ ಕ್ರಿಕೆಟ್ ನಲ್ಲಿ 12ನೇ ಶತಕ ಸಿಡಿಸಿದ್ರು.
ಮತ್ತೊಂದೆಡೆ ರವೀಂದ್ರ ಜಡೇಜಾ ಕೂಡ ತಾಳ್ಮೆಯಿಂದ ಆಟವಾಡುತ್ತಾ ರಹಾನೆಗೆ ಸಾಥ್ ನೀಡಿದ್ರು. ಜಡೇಜಾ ಅಜೇಯ 40 ರನ್ ಗಳಿಸಿದ್ರು.
ಒಟ್ಟಾರೆ, ಎರಡನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಐದು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ.
ಆಸ್ಟ್ರೇಲಿಯಾ ಪರ ಮಿಟ್ಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ಉರುಳಿಸಿದ್ರು. ನಥಾನ್ ಲಿಯಾನ್ ಒಂದು ವಿಕೆಟ್ ಪಡೆದ್ರು.