20202ರ ಟಿ-ಟ್ವೆಂಟಿ ವಿಶ್ವಕಪ್ ಆತಿಥ್ಯಕ್ಕೆ ಆಸ್ಟ್ರೇಲಿಯಾ ರೆಡಿ…?
ಈಗ ಪ್ರತಿ ದಿನ 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ನಡೆಸಲು ಸಿದ್ಧತೆಯನ್ನೂ ನಡೆಸುತ್ತಿದೆ. ಆದ್ರೆ ಬಿಸಿಸಿಐನ ಲೆಕ್ಕಚಾರ ಈಗ ಉಲ್ಟಪಲ್ಟಾ ಆಗುವ ಸಾಧ್ಯತೆಗಳು ಕಂಡು ಬರುತ್ತಿದೆ. ಯಾಕಂದ್ರೆ ಆಸ್ಟ್ರೇಲಿಯಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ಅಲ್ಲಿನ ಪ್ರಧಾನಿಯೇ ಚಿಕ್ಕ ಸುಳಿವನ್ನು ನೀಡಿದ್ದಾರೆ.
ಜುಲೈ ನಲ್ಲಿ ಸುಮಾರು 10 ಸಾವಿರ ಪ್ರೇಕ್ಷಕರು ಕ್ರೀಡಾ ತಾಣಗಳಿಗೆ ಬರಬಹುದು. ಈ ಹಂತದಲ್ಲಿ ಹಲವಾರು ಕ್ರೀಡಾ ಸ್ಪರ್ಧೆಗಳು ಪ್ರೇಕ್ಷಕರ
ಉಪಸ್ಥಿತಿ ಇಲ್ಲದೆ ನಡೆಯುತ್ತವೆ. ಆದ್ರೆ ಟಿ-ಟ್ವೆಂಟಿ ವಿಶ್ವಕಪ್ ಅಕ್ಟೋಬರ್ -ನವೆಂಬರ್ ನಲ್ಲಿ ನಡೆಸುವುದನ್ನು ಆಸ್ಟ್ರೇಲಿಯಾ ಎದುರು ನೋಡುತ್ತಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ಮುಂದಿನ ತಿಂಗಳು ನಿರ್ಧಾರ ಮಾಡಲಿದೆ. 16 ರಾಷ್ಟ್ರಗಳು ಭಾಗವಹಿಸುತ್ತಿರುವ ಈ ಟೂರ್ನಿಗೆ ಕೋವಿಡ್-19 ಅಡ್ಡಿಯನ್ನುಂಟು ಮಾಡುತ್ತಿದೆ. ಹಾಗೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿಯು ಫಿಕ್ಸ್ ಆಗಿದೆ. ಡಿಸೆಂಬರ್ ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಎಮ್‍ಸಿಜಿ. ಎಸ್‍ಸಿಡಿ, ಆಡಿಲೇಡ್ ಓವಲ್ ಮೊದಲಾದ ದೊಡ್ಡ ಕ್ರೀಡಾಂಗಣಗಳನ್ನು ಬಿಟ್ಟು 40ಸಾವಿರಕ್ಕಿಂತ ಕಡಿಮೆ ಸಾಮಥ್ರ್ಯವಿರುವ ಕ್ರೀಡಾಂಗಣಗಳಿಗೆ ಸುಮಾರು 10 ಸಾವಿರ
ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಯಾವುದಕ್ಕೂ ಮುಂದಿನ ಕೆಲವು ವಾರಗಳ ತನಕ ಕಾದು ನೋಡಬೇಕು. ಹಾಗೇ ಈ ಬಗ್ಗೆ ಆಯಾ ರಾಜ್ಯ ಮತ್ತು ಪ್ರಾದೇಶಿಕ ಕೇಂದ್ರಗಳ ಮುಖ್ಯ ಆರೋಗ್ಯ ಅಧಿಕಾರಿಗಳು ನಿರ್ಧಾರ ಮಾಡಬೇಕಾಗುತ್ತದೆ, ಅಲ್ಲದೆ ಅವರು ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಾರೆ ಎಂದು ಮೊರಿಸನ್ ಹೇಳಿದ್ದಾರೆ.
ಮತ್ತೊಂದೆಡೆ ನ್ಯೂಜಿಲೆಂಡ್ ನಲ್ಲಿ ಕೋವಿಡ್ 19 ಮುಕ್ತಗೊಂಡಿದೆ. ಆಸ್ಟ್ರೇಲಿಯಾದಲ್ಲೂ ಕೊರೋನಾ ಹಾವಳಿ ಬೇರೆ ದೇಶಗಳಿಗೆ ಹೋಲಿಸಿದ್ರೆ ಕಡಿಮೆ ಇದೆ. ಇಲ್ಲಿಯವರೆಗೆ 7000 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.
ಇದೇ ವೇಳೆ ಕ್ರೀಡಾಂಗಣಗಳಿಗೆ 40ಸಾವಿರಕ್ಕಿಂತ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ನೀಡಲು ಇನ್ನೂ ಸ್ವಲ್ಪ ದಿನ
ಕಾಲವಾಕಾಶಬೇಕು. ಹಾಗೇ 40ಸಾವಿರಕ್ಕಿಂತ ಹೆಚ್ಚು ಅಥವಾ 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ನೀಡಿದಾಗ ಆವರಣ ಪ್ರವೇಶ, ಸಾರ್ವಜನಿಕ ಸಾರಿಗೆ ಸೇರಿದಂತೆ ಎಲ್ಲಾ ವಿಷ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊರಿಸನ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಕ್ರಿಕೆಟ್ ಆಸ್ಟ್ರೇಲಿಯಾದ ಬೆನ್ನಿಗೆ ನಿಂತಿದ್ದಾರೆ. ಆದ್ರೆ ಐಸಿಸಿ ನಿರ್ಧಾರವೇ ಅಂತಿಮವಾಗಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಮುಂದಿನ ಐಸಿಸಿ ಸಭೆಯತ್ತ ನೆಟ್ಟಿದೆ.








