Author Special : ಹೌದು..!! ಆ ದಿನ ನೆನಪಿದೆ ಇನ್ನ..!!
ನೆನಪಿದೆ….
ಆ ದಿನ ಕಡುಕೆಂಪಂತೆ ಕಂಡಿತ್ತು ನನಗಾ… ವಾತಾವರಣ..!!
ಮುಸ್ಸಂಜೆಯ ಹೊತ್ತಲ್ಲಿ ಕಡಲ ಕಿನಾರೆಯಲ್ಲಿ ನಿಂತಿದ್ದೆ..
ಹಕ್ಕಿಗಳು ಅತಿ ವೇಗವಾಗಿ ಹಾರುತ್ತಿವೆ , ಗೂಡು ಸೇರುವ ತವಕವಿದೆ..!!
ಕೈಗಳ ಮಡಿಚಿ ನಿಂತು ನೋಡುತ್ತಿದ್ದವಳಿಗ್ಯಾಕೋ ತನ್ನ ಗೂಡು ಸೇರುವ ಮನಸ್ಸಿಲ್ಲ..
ಹಾರಬಾರದೇ ನಾನೂ ಆಗಸದಲ್ಲಿ ನಿಮ್ಮಂತೆಯೇ ಸ್ವಚ್ಛಂದವಾಗಿ.. ಮನುಷ್ಯ ಜೀವನವದ್ಯಾಕೋ ಸಾಕಾಗಿದೆ.. ನೇರಸನ ಬಳಿ ಸೇರುವ ತವಕವಿದೆ, ನೀವಷ್ಟು ಸನಿಹವಿದ್ದರೆ ನನ್ನ ರವಿಗೆ ನನಗೆ ಅಸೂಯೆ ಹುಟ್ಟುತ್ತಿದೆ ನಿಮ್ಮ ಮೇಲೆ ಈ ಆಕಾಶಪ್ರಿಯೆಗೆ..
ನನ್ನ ಸೂರ್ಯನ ವಿದಾಯ ನೋವಾದರೂ ಚಂದಿರನ ಆಗಮನ ಮನಸ್ಸಿಗೆ ಸಮಾಧಾವಿದೆ..
ತನ್ನ ಕರ್ತವ್ಯ ಮುಗಿಸಿ ದಿನೇಶ ಹೊರಟಿದ್ದಾನೆ..
ಹೊಸದೇನಲ್ಲ ನಿತ್ಯ ರವಿಗೆ ವಿದಾಯ ಹೇಳುವುದು ಇದ್ದಿದ್ದೆ..
ಮರು ದಿನ ದಿವಾಕರನ ಆಗಮನವಾಗುವುದು ಇದ್ದಿದ್ದೇ…
ಶಶಿಗೆ ಕೆಲಸ ವಹಿಸಿ ಪ್ರಭಾಕರ ಅಸ್ತಂಗತಿಸಿದರೂ ಮರುದಿನವಾತನ ಹಾಜರಿ ಇದ್ದಿದ್ದೇ ತಪ್ಪದೇ..
ಆದ್ರೂ ಅಂದ್ಯಾಕೋ ದಿಗಿಲು , ಮನಸ್ಸಾಗುತ್ತಿಲ್ಲ ದಿನಕರನ ಕಳುಹಿಸಿಕೊಡಲು ಅಂದು ಅದೀಗಲೂ ನೆನಪಿದೆ,
ಹೃದಯದಲ್ಲಿ ಏನೋ ಸಂಕಟ, ನೇಸರನಿಗೆ ಮನಸಾರೆ ಹೇಳಿದ್ದೆ, ಇನ್ನಷ್ಟು ಹೊತ್ತು ಇದ್ದು ಬಿಡು ಕಣ್ತುಂಬಿಕೊಳ್ಳುವ ಮನಸ್ಸಾಗ್ತಿದೆ , ಯಾಕೋ ಭಯವಾಗ್ತಿದೆ… ಕಣ್ಣಲ್ಲೇ ಸಂದೇಶ ಕಳುಹಿಸಿದ್ದೆ ನನ್ನ ಮನಸ್ಸಿನಲ್ಲಿ ಶಿಲೆಯಾಗಿ ಉಳಿದಿರುವ ಆ ರವಿತೇಜನಿಗೆ..
ಆದ್ರೂ ಅದ್ಯಾಕೋ ಎಂದೂ ಇಲ್ಲದ ಆತುರ ಅಂದೇ ಇತ್ತು ಕಾಣುತ್ತೆ ನನ್ನ ಮಿಹಿರನಿಗೆ , ಕಣ್ತುಂಬಿಕೊಂಡವಳ ನೋಡಿಯೂ ನೋಡದಂತೆಯೋ ಅಥವ , ಈ ಸ್ಥಿತಿಯಲ್ಲಿ ಎನ್ನ ನೋಡಲು ಸಂಕಟವೇನೋ ಮೋಡಗಳ ಮರೆಯಾಗಿಬಿಟ್ಟ ಅವ ನನಗಿನ್ನೂ ಆ ದಿನ ನೆನಪಿದೆ..
ಒಲ್ಲದ ಮನಸ್ಸಲ್ಲಿ ವಿದಾಯ ಹೇಳಿದ್ದೆ..
ನಾಳೆ ಬರುತ್ತಾನೆ ಗೊತ್ತಿದೆ.. ಆದ್ರೂ ಯಾಕೋ ದಿಗಿಲಾಗಿದೆ..
ಚಂದಿರನ ಆಗಮನಕ್ಕಾಗಿ ಕಾಯುತ್ತಿದ್ದೆ , ಆಗಸದತ್ತ ದೃಷ್ಠಿಯ ನೆಟ್ಟಿ..
ಮನಸ್ಸಿಗಾದ ಸಂಕಟಕ್ಕೆ ನೆಮ್ಮದಿ ಬೇಕಿತ್ತಲ್ವಾ..?? ನಗು ಮುಖದ ಚಂದ್ರಮನ ಜೊತೆಗೆ ಮಾತನಾಡಿ ನನ್ನ ದಿನಕರನ ವಿರುದ್ಧ ವಟಗುಟ್ಟಬೇಕಿತ್ತಲ್ಲಾ..!! ಆದ್ರೆ ಅದ್ಯಾಕೋ ಹಿಮಕರನೂ ಮೂತಿ ಮುರಿದಿದ್ದು ನೆನಪಿದೆ..
ಕಣ್ಣಲ್ಲೇ ಪ್ರಶ್ನೆ ಮಾಡಿದ್ದೆ , ತಪ್ಪೇನು ಮಾಡಿದ್ದೆ , ನೀನ್ಯಾಕೆ ಸಿಟ್ಟಾದೆ ಕೇಳಿದ್ದೆ..
ದ್ವಿಜರಾಜ ನನ್ನ ಪ್ರಶ್ನೆಗೆ ನಕ್ಕನೋ , ಅತ್ತನೋ , ಮುನಿಸಿಕೊಂಡನೋ ಗೊತ್ತಿಲ್ಲ , ಮೋಡಗಳಲ್ಲಿ ಮರೆಯಾದ ತೇಜಸ್ವಿ ಸೂರ್ಯನಂತೆ..
ಇನ್ನಷ್ಟು ಮನ ನೊಂದಿತ್ತು ಕಣ್ ತುಂಬಿತ್ತು.. ಅದಾಗಲೇ ವರುಣ ತನ್ನ ಇರುವಿಕೆಯ ತೋರಿಸಿದ್ದ..
ಹೂಮಳೆ ನನ್ನೆದೆ ತಣಿಸಿದ್ದು ಸುಳ್ಳಲ್ಲ , ನೋವಲ್ಲೂ ನಾ ನಕ್ಕಿದ್ದು ಸತ್ಯ ,
ನನಗೆ ವರುಣನ ಸಂದೇಶ ಸಿಕ್ಕಿತ್ತು , ಅದು ಭಾನು ಸಂದೇಶವಾಗಿತ್ತು ,
ನಾಳೆ ಮತ್ತೆ ಬರುವೆ , ನಿನಗಾಗಿ ಕಾಯುವೆ , ವರುಣನಿಗೂ ಭುವಿಯ ಮೇಲೆ ಪ್ರೀತಿ ಇಲ್ಲವೇ ,
ಅವನಿಗಾಗಿ ನಾ ಮರೆಯಾದೆಯಷ್ಟೇ , ನಾಳೆ ಮತ್ತೆ ಬರುವೆ ನಿನ್ನ ನೋಡುವ ಆಸೆಯೇನು ನನಗಿಲ್ವೇ..??
ಸಂದೇಶ ನೀಡಿದ್ದ ನಾನು ಅತ್ತಿದ್ದೆ ಖುಷಿಗೆ ,
ಹೌದು..!!
ನಾಳೆ ಮತ್ತೆ ಬಂದೇ ಬರುತ್ತಾನೆ ಎನ್ನ ಭಾಸ್ಕರ,
ಮುಗುಳು ನಕ್ಕು ಮಳೆಯ ಅಪ್ಪಿ ಮುತ್ತಿಟ್ಟು ರವಿಗೆ ಪ್ರೀತಿಯ ಸಂದೇಶ ರವಾನಿಸಿಯೇ ಮನೆ ಕಡೆಗೆ ಹೊರಟಿದ್ದೆ..
ಆ ದಿನವಿನ್ನೂ ನೆನಪಿದೆ..
– ನಿಹಾರಿಕಾ ರಾವ್ ನಮ್ಮು