Author Special : ಮನಸ್ಸಿನ ಕೋಣೆಗೆ ಭಾವನೆಗಳ ನೂಕಿ ಬೀಗ ಜಡಿದ ನೆನೆಪು..!!!
ಭಾವನೆಗಳ ಜೊತೆಗೆ ಹಳೆಯ ‘ನನ್ನನ್ನ’ ಮೂಟೆ ಕಟ್ಟಿ ಅಂದು ಬಿಸಾಡಿದ್ದಷ್ಟೇ ಅಲ್ಲ ಬಂಧಿಸಿದ್ದ ನೆನಪು..
ನೋವುಂಡ ಮನಕ್ಕೆ ಅನುಭವದ ಬೀಗ ಜಡಿದು ಕಣ್ಣೀರಿನ ದಿಗ್ಭಂಧನ ಹಾಕಿ , ಹೊಸ ಮುಖವಾಡದೊಂದಿಗೆ ಬಂದಂತಹ ನೆನಪು..
ಒಂದೆರೆಡು ದಿನ ಗೋಳಾಡಿದವು , ಕರುಣೆ ಉಕ್ಕಲಿಲ್ಲ. ಗೋಗರೆದವು , ಬಿಡುಗಡೆ ಮಾಡುವ ಮನಸ್ಸಾಗಲಿಲ್ಲ..
ಕ್ರೂರಿಯಾಗಿ ಬದಲಾಗಿದ್ದವಳಿಗದ್ಯಾಕೋ ಭಾವನೆಗಳ ನೋವೇ ಅರ್ಥವಾಗುತ್ತಿಲ್ಲ,
ಆದ್ರೆ ಅದ್ಯಾಕೋ ಅದೊಂದು ದಿನ ಒಂದು ಸಣ್ಣ ಯೋಚನೆ ಮತ್ತೆ ಅವುಗಳ ಭೇಟಿ ಮಾಡುವ ಮನಸ್ಸಾಗಿದ್ದು ಸುಳ್ಳಲ್ಲ…
ಕೀಲಿ ಕೈಗಾಗಿ ಹುಡುಕಾಡ ತೊಡಗಿದೆ ಅದು ಸಿಗುತ್ತಲೇ ಇಲ್ಲ … ಕಳೆದು ಹೋದ ಹಳೆಯ ನನ್ನಂತೆ..
ಆದರೂ ಹೋಗಲೇಬೇಕೆನಿಸಿ ಹೋದೆ ಬರಿ ಗೈಲಿ ಅಲ್ಲ ಬೇಡದ ನೆನಪುಗಳಿಂದ ತಯಾರಿಸಿದ್ದ ಸುತ್ತಿಗೆಯೊಂದಿಗೆ..
ಅದೆಷ್ಟೋ ದಿನವಾಗಿತ್ತು ಅಲ್ಲಿಗೆ ಹೋಗಿ ಕೈ ಕಾಲುಗಳು ಕಂಪಿಸುತ್ತಿವೆಯಲ್ಲ..!! ಯಾಕೆಂದು ಗೊತ್ತಿಲ್ಲ , ಇದು ಹಳೆಯ ನಾನಲ್ಲವಲ್ಲಾ..?? ಮತ್ಯಾಕೆ ಈ ಹೆದರಿಕೆಯಲ್ಲಾ..!!
ಭಾವನೆಗಳ ಮಾತನಾಡಿಸಿ ಬರೋಣವೆನಿಸಿ ಹೋದರೆ ನಿಶ್ಯಬ್ಧಕ್ಕೂ ಭಯ ಹುಟ್ಟಿಸುವ ಮೌನವಿದೆಯಲ್ಲ..?? ಇದೇನಿದು ನನ್ನಲ್ಲೇ ಗೊಂದಲ…
ನಾ ಹೋದಾಗ ನೋಡಿದೆ , ಕೀಲಿ ತುಕ್ಕು ಹಿಡಿದಿದೆ..
ಕೊಂಕು ನಕ್ಕೆ , ವರ್ಷಗಳಿಂದ ಮನಸ್ಸು ತುಕ್ಕು ಹಿಡಿದದ್ದು ನೆನಪಾಗಿ
ಬೀಗ ಜಡೆಯಲು ನೆನಪುಗಳ ಸುತ್ತಿಯಿಂದ ಜಡಿದು ಕೋಣೆಯ ಒಳಹೊಕ್ಕಾಗ ಘಾಟು..!
ಉಸಿರಾಡಲು ಕಷಟ್ವಾಗಿ ಹೊರಬಂದು ಮತ್ತಷ್ಟು ಹೊತ್ತು ಬಿಟ್ಟು ಒಳ ಹೋದೆ,
ಕಣ್ಣಾಲೆ ತುಂಬಿತ್ತು..
ಶವಗಳಲ್ಲ , ಉಳಿದಿರುವುದು ಭಾವನೆಗಳ ಅಸ್ತಿ ಪಂಜರವಷ್ಟೇ…
ಗಬ್ಬು ನಾರುತ್ತಿದೆ ಪ್ರಸ್ತುತ ಎನ್ನ ಮನಸ್ಸಿನಂತೆ
ಅರೇ..!!! ಇದೇನಾಗಿದೆ ಭಾವನೆಗಳು ಉಸಿರುಗಟ್ಟು ಸತ್ತು ಹೋಗಿವೆ..
ದುಃಖ ಮಡುಗಟ್ಟಿತ್ತು… ಚರಮಗೀತೆ ಹಾಡಿ ಬಂದಿದ್ದೆ..
ಭಾವನೆಗಳ ಸಾವಿಗೆ ಕಾರಣಳಾದ ನನ್ನ ನಾನು ಕ್ಷಮಿಸಿಕೊಳ್ಳಲಾರದೇ ಹೊರಗೆ ಬಂದಿದ್ದೆ..
ಬೀಗ ಹಿಡಿದಾಗ ಕೈ ಕಂಪಿಸಿದೆ
ಕೀಲಿ ಕೈ ಜಾರಿತ್ತು ಕೆಳಗೆ , ಕಣ್ಣ ಹನಿ ಧರೆಗುರುಳಿದಂತೆ..
ಬೀಗ ಜಡಿಯುವ ಭರದಲಿ ಚಿಗುರ ಕೊಂದಿದ್ದೆ
ನನ್ನ ಜೀವನಕ್ಕೆ ಸಿಕ್ಕ ಮರು ಅವಕಾಶದ ಚಿಗುರ ಎಡಗಾಲಲ್ಲಿ ಹೊಸಕಿದಂತೆ..!!
ಎದೆ ಭಾರವಾಗಿತ್ತು…!!
ಕಣ್ತುಂಬಿಬಂದಿತ್ತು..!!
ಪಶ್ಚಾತಾಪದ ಎಣ್ಣೆ ಸುರಿದು ಬಾವನೆಗಳ ಅಸ್ತಿಪಂಜರದ ಜೊತೆಗೆ
ನಾ ಕೊಂದ ಚಿಗುರಿಗೆ ಕೊಳ್ಳೆ ಇಟ್ಟು ಅಂತ್ಯ ಸಂಸ್ಕಾರ ನೆರವೇರಿಸಿ ಮತ್ತದೇ ಮುಖವಾಡ ಧರಿಸಿ ವಾಪಸ್ಸು ಬಂದಿದ್ದೆ ಶಾಶ್ವತವಾಗಿ,,,
ಅದೀಗ ಸತ್ತು ಬದುಕುತ್ತಿರುವ ಅರ್ಥವಿಲ್ಲದ ಮನಸ್ಸಲ್ಲಿ ಎಂದಿಗೂ ಮಾಸದ ನೆನಪು..!!
– ನಿಹಾರಿಕಾ ನಮ್ಮು