ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ..!
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಕ್ಸರ್ ಪಟೇಲ್ ಫಿಟ್ ಆಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅಕ್ಸರ್ ಪಟೇಲ್, ಇದೀಗ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಲ್ಲದೆ ಎರಡನೇ ಟೆಸ್ಟ್ ಪಂದ್ಯದಲ್ಲಿ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಶಹಬಾಝ್ ನದೀಮ್ ಸ್ಥಾನದಲ್ಲಿ ಅಕ್ಸರ್ ಪಟೇಲ್ ಸ್ಥಾನ ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಅಕ್ಸರ್ ಪಟೇಲ್ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಜೊತೆಗೆ ಎರಡನೇ ಟೆಸ್ಟ್ ಪಂದ್ಯಕ್ಕೆ ಅಕ್ಸರ್ ಪಟೇಲ್ ಆಯ್ಕೆಗೆ ಸಿದ್ಧರಾಗಿದ್ದಾರೆ ಎಂದು ಬಿಸಿಸಿಐ ಹೇಳಿಕೊಂಡಿದೆ.
ಆಲ್ ರೌಂಡರ್ ಕೂಡ ಆಗಿರುವ ಅಕ್ಸರ್ ಪಟೇಲ್ ಬ್ಯಾಟಿಂಗ್ ನಲ್ಲೂ ಟೀಮ್ ಇಂಡಿಯಾಗೆ ನೆರವಾಗಬಹುದು. ಹೀಗಾಗಿ ಕೆಳ ಕ್ರಮಾಂಕದ ಬ್ಯಾಟಿಂಗ್ ಬಲವೂ ಹೆಚ್ಚಾಗಲಿದೆ. ಹೀಗಾಗಿ ಅಶ್ವಿನ್ ಜೊತೆ ಅಕ್ಸರ್ ಪಟೇಲ್ ಸ್ಪಿನ್ ಜಾದು ಮಾಡಲು ಸನ್ನದ್ಧರಾಗಿದ್ದಾರೆ.
ಆದ್ರೆ ಟೀಮ್ ಇಂಡಿಯಾದ ಮೂರನೇ ಸ್ಪಿನ್ನರ್ ಯಾರು ಅನ್ನೋದು ಸದ್ಯಕ್ಕಂತೂ ಪ್ರಶ್ನೆಯಾಗಿದೆ. ವಾಷಿಂಗ್ಟನ್ ಸುಂದರ್ ಆಲ್ ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಕೊಹ್ಲಿಯ ಒಲವು ಕೂಡ ವಾಷಿಂಗ್ಟನ್ ಮೇಲೆ ಜಾಸ್ತಿ ಇದೆ. ಈ ನಡುವೆ ಕೆಲವು ಕ್ರಿಕೆಟ್ ಪಂಡಿತರು ಕುಲದೀಪ್ ಯಾದವ್ ಪರ ನಿಂತಿದ್ದಾರೆ. ಹೀಗಾಗಿ ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.
ಇಂಗ್ಲೆಂಡ್ ವಿರುದ್ಧ ಪರಿಣಾಮಕಾರಿಯಾದ ಸ್ಪಿನ್ನರ್ ಅನ್ನು ಕಣಕ್ಕಿಳಿಸುವ ಯೋಚನೆ ಕೂಡ ಇದೆ. ಆಗ ಕುಲದೀಪ್ ಯಾದವ್ ಮುಂಚೂಣಿಯಲ್ಲಿರುತ್ತಾರೆ. ಆದ್ರಿಂದ ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಪೈಕಿ ಇಬ್ಬರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲೇಬೇಕು. ಏನಿದ್ರೂ ಅಂತಿಮ ನಿರ್ಧಾರ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ನದ್ದು.
ಈಗಾಗಲೇ ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ಟೀಮ್ ಇಂಡಿಯಾ ಕಂಗಾಲಾಗಿದೆ. ಇದ್ರಿಂದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು ಅನ್ನೋ ಜಿದ್ದಿಗೆ ಬಿದ್ದಿದೆ. ತವರು ನೆಲದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳುವುದು ಒಂದು ಕಡೆಯಾದ್ರೆ, ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸುವುದು ಮತ್ತೊಂದು ಕಡೆ. ಹಾಗೇ ವಿರಾಟ್ ಕೊಹ್ಲಿಯ ನಾಯಕತ್ವದ ಪ್ರತಿಷ್ಠೆ ಕೂಡ ಇದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಅವರ ಫಾರ್ಮ್ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.