ಚೊಚ್ಚಲ ಟೆಸ್ಟ್ ಸರಣಿಯಲ್ಲಿ ದಾಖಲೆಯ ಅಕ್ಷರ ಬರೆದ ಅಕ್ಸರ್ ಪಟೇಲ್..!
ಅಕ್ಸರ್ ಪಟೇಲ್.. ಭರವಸೆ ಮೂಡಿಸಿರುವ ಟೀಮ್ ಇಂಡಿಯಾದ ಸ್ಪಿನ್ ಜಾದೂಗಾರ. ತನ್ನ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಅಕ್ಸರ್ ಪಟೇಲ್ ಕೂಡ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಹೌದು, ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅಕ್ಸರ್ ಪಟೇಲ್ 27 ವಿಕೆಟ್ ಉರುಳಿಸಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಅಕ್ಸರ್ ಪಟೇಲ್ ಗೆ ಎರಡನೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ತಂಡದ ಗೇಮ್ ಪ್ಲಾನ್ ಗಳನ್ನು ಬುಡಮೇಲು ಮಾಡಿದ್ದರು. ಅಲ್ಲದೆ ಅಶ್ವಿನ್ ಜೊತೆಸೇರಿಕೊಂಡು ಅಕ್ಸರ್ ಪಟೇಲ್ ಸ್ಪರ್ಧೆಗೆ ಬಿದ್ದಂತೆ ವಿಕೆಟ್ ಉರುಳಿಸಿದ್ದರು.
ಇದೀಗ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 10.59ರ ಸರಾಸರಿಯಲ್ಲಿ 27 ವಿಕೆಟ್ ಪಡೆದುಕೊಂಡಿದ್ದಾರೆ. ಇದ್ರಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗಳ ಗೊಂಚಲುಗಳನ್ನು ಪಡೆದುಕೊಂಡಿದ್ದಾರೆ.
ಗಾಯಗೊಂಡಿರುವ ರವೀಂದ್ರ ಜಡೇಜಾ ಸ್ಥಾನವನ್ನು ಗಿಟ್ಟಿಸಿಕೊಂಡ ಅಕ್ಸರ್ ಪಟೇಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಚೆನ್ನೈನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಕ್ಸರ್ ಪಟೇಲ್ 60ಕ್ಕೆ ಐದು ವಿಕೆಟ್ ಪಡೆದ್ರು. ನಂತರ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಉರುಳಿಸಿದ್ದಾರೆ. ಇದ್ರಲ್ಲಿ 38ಕ್ಕೆ 6 ವಿಕೆಟ್ ಹಾಗೂ 32ಕ್ಕೆ ಐದು ವಿಕೆಟ್ ಪಡೆದು ಎರಡೇ ದಿನದಲ್ಲಿ ಪಂದ್ಯ ಮುಗಿಯುವಂತೆ ಮಾಡಿದ್ದರು ಅಕ್ಸರ್ ಪಟೇಲ್
ಅಂದ ಹಾಗೇ ಅಕ್ಸರ್ ಪಟೇಲ್ ಅವರ ಈ ಸಾಧನೆಯ ಮೂಲಕ ಮಾಜಿ ಕ್ರಿಕೆಟಿಗ ದಿಲೀಪ್ ದೋಶಿ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ. ಈ ಹಿಂದೆ ದಿಲೀಪ್ ದೋಶಿ ತನ್ನ ಚೊಚ್ಚಲ ಟೆಸ್ಟ್ ಸರಣಿಯ ಆರು ಪಂದ್ಯಗಳಲ್ಲಿ 27 ವಿಕೆಟ್ ಪಡೆದುಕೊಂಡಿದ್ದರು.