ಅತ್ಯುತ್ಕೃಷ್ಟ ಔಷಧೀಯ ಗುಣವುಳ್ಳ ಅತಿಮಧುರ ಕಾಷ್ಠವಿದು ಜ್ಯೇಷ್ಠಮಧು:
ಆಯುರ್ವೇದದಲ್ಲಿ ಅತಿ ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿರುವ ಮೂಲಿಕೆ ಎಂದರೆ ಅದು ಜ್ಯೇಷ್ಠಮಧು. ‘ಅತಿಮಧುರ’ ಎಂಬುದು ಇದರ ಇನ್ನೊಂದು ಹೆಸರು. ದೀರ್ಘಕಾಲ ಬೆಳೆಯುವ ವನಸ್ಪತಿಗಳಲ್ಲಿ ಇದೂ ಒಂದು. ಇದರಲ್ಲಿ ಅನ್ನ ಸತ್ವಗಳಾದ ಸಕ್ಕರೆ, ಪಿಷ್ಟ, ಮ್ಯಾಗ್ನಿಶಿಯಂ ಅಂಶಗಳಿವೆ. ಊತ ಉರಿಗಳಲ್ಲಿ ಈ ಔಷಧಿ ಪರಿಣಾಮಕಾರಿಯಾಗಿ ಬಳಸಲ್ಪಡುತ್ತದೆ.
ಇದಕ್ಕೆ ಸಂಸ್ಕೃತದಲ್ಲಿ ಯಷ್ಠಿಮಧುವೆಂದೂ, ಹಿಂದಿಯಲ್ಲಿ ಜೇಠಿಮಧು, ಮುಲೇತಿ ಎಂದೂ, ಇಂಗ್ಲೀಷ್ ನಲ್ಲಿ ಲಿಕರಿಸ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಪರ್ಯಾಯ ಪದಗಳೆಂದರೆ, ಮಧುಯಷ್ಠಿ, ಮಧುಕ, ಜಲಯಷ್ಠಿ, ಕ್ಲೀತಕ, ಮಧುರ, ಮಧುಸ್ರಾವ, ಯಷ್ಠಿಕ, ಅತಿರಸ. ಇದರ ಕಾಂಡ ಮತ್ತು ಬೇರು ಸಿಹಿಯಾಗಿರುವುದರಿಂದ ಇದನ್ನು ಮಧುಕ ಎಂದು ಕರೆಯುತ್ತಾರೆ.
ಇದು ವರ್ಷಗಟ್ಟಲೆ ಬೆಳೆಯುವ ಸಸ್ಯಬಾಗಿದ್ದು, ಎರಡರಿಂದ ಐದು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಬೇರಿನ ಒಳಭಾಗವು ಹಳದಿ ಬಣ್ಣದಿಂದ ಕೂಡಿರುತ್ತದೆ. ಹೊರಭಾಗ ಕೆಂಪುಬಣ್ಣವನ್ನು ಹೊಂದಿರುತ್ತದೆ. ಇದರ ಎಲೆಗಳು ಅಂಡಾಕಾರವಾಗಿಯೂ, ಹೂವುಗಳು ನೇರಳೆ ಬಣ್ಣವನ್ನೂ ಹೊಂದಿದೆ. ಮೂರರಿಂದ ಐದು ಅಂಗುಲ ಬೆಳೆಯುವ ಹಣ್ಣುಗಳಲ್ಲಿ ಎರಡರಿಂದ ಮೂರು ವೃತ್ತಾಕಾರದ ಬೀಜಗಳಿರುತ್ತವೆ. ಪಂಜಾಬ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಆಯುರ್ವೇದದ ಅತ್ಯಂತ ಪುರಾತನ ವೈದ್ಯ ಚರಕನ ಪ್ರಕಾರ ಜ್ಯೇಷ್ಠಮಧುವಲ್ಲಿ ಅನುಪ ಯಷ್ಠಿಮಧು ಮತ್ತು ಸ್ಥಳಜ ಯಷ್ಠಿಮಧು ಎಂಬ ಎರಡು ವಿಧಗಳಿವೆ. ಇದರ ಅತ್ಯಂತ ಉಪಯುಕ್ತ ಅಂಶ ಎಂದರೆ ಅದು ಬೇರು. ಇದರ ಎಣ್ಣೆಯನ್ನು ಭಗಂದರ ಗಾಯಕ್ಕೆ ಹಚ್ಚುವುದರಿಂದ ಭಗಂದರ ರೋಗವು ಕಡಿಮೆಯಾಗುತ್ತದೆ. ಇದರ ಚೂರ್ಣವನ್ನು ಜೇನಿನಲ್ಲಿ ಸೇರಿಸಿ ತಿನ್ನುವುದರಿಂದ ಕಫವಿಲ್ಲದ ಒಣಕೆಮ್ಮು ಮಾಯವಾಗುತ್ತದೆ.
ಜೀರಿಗೆ ಮತ್ತು ಜ್ಯೇಷ್ಠಮಧು ಕಷಾಯವನ್ನು ಸೇವಿಸುವುದರಿಂದ ಪಿತ್ತ, ಹೊಟ್ಟೆನೋವು, ಕಣ್ಣು ಉರಿ ಕಡಿಮೆಯಾಗುತ್ತದೆ. ಜ್ಯೇಷ್ಠಮಧುವಿನ ಬೇರನ್ನು ತೇದು ಅದನ್ನು ಸಂಧಿನೋವಿರುವ ಭಾಗಕ್ಕೆ ಲೇಪಿಸುವುದರಿಂದ ಮತ್ತು ಇದರ ಕಷಾಯವನ್ನು ಕುಡಿಯುವುದರಿಂದ ಸಂಧಿನೋವು ಸಹ ಗುಣವಾಗುತ್ತದೆ. ಅತಿಯಾದ ರಕ್ತಸ್ರಾವ ತಡೆಯಲು ಇದರ ಕಷಾಯವನ್ನು ಎರಡು ಗಂಟೆಗೊಮ್ಮೆ ಸೇವಿಸಬೇಕು.
ಹಾಲು, ಅಕ್ಕಿಯ ಪಾಯಸಕ್ಕೆ ಇದರ ಚೂರ್ಣ ಮತ್ತು ತುಪ್ಪ ಬೆರೆಸಿ ಸೇವಿಸುವುದರಿಂದ ಒರಟಾದ ಸ್ವರವು ಇಂಪಾಗುತ್ತದೆ. ಜ್ಯೇಷ್ಠಮಧುವನ್ನು ಬೂದುಕುಂಬಳಕಾಯಿ ರಸದಲ್ಲಿ ಅರೆದು ಲೇಪಿಸುವುದರಿಂದ ಅಪಸ್ಮಾರ ರೋಗವು ನಿವಾರಣೆಯಾಗುತ್ತದೆ. ಹೊಸದಾಗಿ ತಾಯಿಯಾದವರಲ್ಲಿ ಎದೆಹಾಲಿನ ಹೆಚ್ಚಳಕ್ಕೂ ಜ್ಯೇಷ್ಠಮಧು ಉಪಯೋಗಕ್ಕೆ ಬರುತ್ತದೆ. ಜ್ಯೇಷ್ಠಮಧುವಿನ ಚೂರ್ಣಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಎದೆಹಾಲಿನ ಉತ್ಪತ್ತಿ ಜಾಸ್ತಿಯಾಗುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು