ಶಿವಮೊಗ್ಗದಲ್ಲಿ ಮನೆ ಮನೆಗೂ ಆಯುರ್ವೇದ ಕಿಟ್ : ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮನೆ ಮನೆಗೂ ಆಯುರ್ವೇದ ಕಿಟ್ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ ಮಾಡಲಿದ್ದೇವೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 85 ಸಾವಿರ ಮನೆಗಳಿದ್ದು, ಸುಮಾರು 4 ಲಕ್ಷ ಜನರಿಗೆ ಆಯುರ್ವೇದ ಕಿಟ್ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಇದೇ 29 ರಂದು ಕಿಟ್ ವಿತರಣಾ ಕಾರ್ಯಕ್ಕೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜುಲೈ 29 ರಿಂದ ಆಯುರ್ವೇದ ಕಿಟ್ ವಿತರಣೆ ಮಾಡುವ ಕಾರ್ಯ ಆರಂಭವಾಗಲಿದೆ. ಈ ಕಿಟ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ, ಯಾರ ಬಳಿ ಆದರೂ ಆಧಾರ್ ಕಾರ್ಡ್ ಇಲ್ಲದಿದ್ದರೆ ಅದನ್ನು ಮಾಡಿಕೊಡುತ್ತೇವೆ ಎಂದರು.
ಇನ್ನು ಒಮ್ಮೆಗೆ 4 ಲಕ್ಷ ಕಿಟ್ ನೀಡುವುದು ಕಷ್ಟ ಎಂದು ಹೇಳಿದ ಹಿನ್ನೆಲೆಯಲ್ಲಿ ವಾರ್ಡ್ ಹಂತದಲ್ಲಿ ವಿತರಣೆ ಕಾರ್ಯ ಮಾಡಲಿದ್ದೇವೆ. ಈ ಕಾರ್ಯಕ್ರಮ ದೇಶದಲ್ಲೇ ಮೊದಲು ಎಂದು ಭಾವಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ








