ಹಿರೇಮದ್ದು ಅಶ್ವಗಂಧ ಎನ್ನುವ ಉತ್ಕೃಷ್ಟ ದಿವ್ಯೌಷಧಿಯ ಕುರಿತು ನಿಮಗೆಷ್ಟು ಗೊತ್ತು?
ಒಂದು ಚಹಾದ ಜಾಹೀರಾತಿನಲ್ಲಿ ಅಶ್ವಗಂಧದ ಪ್ರಸ್ತಾಪ ಬರುವುದನ್ನು ಗಮನಿಸಿರಬಹುದು. ನಮ್ಮ ಹಿರಿಯರಿಂದ ಹಿರೇಮದ್ದು ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ, ವಾತ ಸಂಬಂಧಿ ದೋಷಗಳನ್ನು ನಿವಾರಿಸುತ್ತದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸಬಲ್ಲ ಶಕ್ತಿ ಇದೆ. ಹಾವು ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇರಸದೊಂದಿಗೆ ಹಚ್ಚಿದರೆ ಬೇಗ ವಿಷವಿಳಿಯುತ್ತದೆ. ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಎಂಬೆಲ್ಲಾ ಹೆಸರುಗಳಿವೆ. ಇದರ ಬೇರಿನಿಂದ ಕುದುರೆ ಮೂತ್ರದ ವಾಸನೆ ಹೊರಡುತ್ತದೆ ಹಾಗೂ ಬೇರನ್ನು ಸ್ವಚ್ಛಗೊಳಿಸಿ ಪುಡಿಮಾಡಿ ಸೇವಿಸಿದರೆ ಕುದುರೆಯ ಶಕ್ತಿ, ಬಲ, ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂದು ಕರೆಯುತ್ತಾರೆ. ಇದಕ್ಕೆ ಇಂಗ್ಲೀಷ್‍ನಲ್ಲಿ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯುವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೋಲನೇಸಿ ಕುಟುಂಬಕ್ಕೆ ಸೇರಿದ ಅಶ್ವಗಂಧದ ವೈಜ್ಞಾನಿಕ ಹೆಸರು ವಿತಾಸಿಯಾ ಸಾಮ್ನಿಫೆರ.
ಸುಮಾರು 1 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮೂಲಿಕೆ ಆಫ್ರಿಕಾ, ಮೆಡಿಟೇರಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಉದ್ದವಿರುವುದಿಲ್ಲ. ಕಹಿರುಚಿ ಹೊಂದಿರುವ ಇದರ ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುತ್ತವೆ. ಅಶ್ವಗಂಧವು ಹಿಂಗಾರಿನಲ್ಲಿ ಬೆಳೆಯಬಹುದಾದ ಬೆಳೆ. ಈ ಬೆಳೆಗೆ ಶುಷ್ಕ ವಾತಾವರಣವಿದ್ದರೂ ನಡೆಯುತ್ತದೆ. ರಾಗಿಯನ್ನು ಬಿತ್ತುವಂತೆ ಈ ಬೆಳೆಯ ಬೀಜವನ್ನು ಚೆಲ್ಲಿ ಬಿತ್ತನೆ ಮಾಡಬಹುದು.
ಅಶ್ವಗಂಧದ ಎಲೆ, ಹಣ್ಣು, ಬೇರು ಚಿಕಿತ್ಸೆಗೆ ಉಪಯುಕ್ತವಾಗಿವೆ. ಅಶ್ವಗಂಧದ ಬೇರಿನಲ್ಲಿರುವ ಸೋಮ್ನಿಫೆರಸ್ ಎಂಬ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಕ್ತ ಶುದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಠಿಯನ್ನು ಕೊಡುತ್ತದೆ. ನಿಶ್ಯಕ್ತಿಯನ್ನು ನಿವಾರಿಸುವ ಶಕ್ತಿಯೂ ಇದಕ್ಕಿದೆ. ಇದರ ಸೇವನೆಯಿಂದ ಚಂಚಲತೆ ಮತ್ತು ಗಾಬರಿ ದೂರವಾಗುತ್ತದೆ. ಮಕ್ಕಳಿಗೆ ಹೆಚ್ಚಿನ ಪುಷ್ಠಿಯನ್ನು ಇದು ನೀಡುತ್ತದೆ. ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ ಮತ್ತು ಯೌವ್ವನವನ್ನು ಈ ಅಶ್ವಗಂಧ ನೀಡುತ್ತದೆ ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುತ್ತದೆ. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿದೋಷಗಳ ನಿವಾರಣೆಯಾಗುತ್ತದೆ. ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ ಸೇವಿಸಬೇಕು. ನಂತರ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸಬೇಕು. ಈ ರೀತಿ ದಿನಕ್ಕೆ ಬೆಳಗ್ಗೆ, ಸಾಯಂಕಾಲ ಎರಡು ಬಾರಿ ಸೇವಿಸುವುದರಿಂದ ಮುಟ್ಟಿನ ದೋಷಗಳ ನಿವಾರಣೆಯಾಗುತ್ತದೆ.
30ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಂಡು, ಒಂದು ಹೊತ್ತಿಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದರೆ ತುಂಬಾದಿನಗಳಿಂದ ಗುಣವಾಗದ ಜ್ವರವೂ ಗುಣವಾಗುವುದು. ಇದರ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲುಸಕ್ಕರೆ ಸೇರಿಸಿ ಬೆಳಿಗ್ಗೆ ಸಂಜೆ ಸೇವಿಸಿದರೆ ವಾತದ ಸಮಸ್ಯೆ ದೂರಾಗುತ್ತದೆ. ಅಶ್ವಗಂಧದ ನಯವಾದ ಪುಡಿಗೆ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದರಿದ ಬೆನ್ನುನೋವು ಮಾಯವಾಗುತ್ತದೆ. ಜೊತೆಗೆ ಪ್ರತಿದಿನ ಎರಡು-ಮೂರು ಬಾರಿ ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು
*








