ನಾಯಕತ್ವ ಬದಲಾವಣೆಗೆ ಪರ-ವಿರೋಧ ಸಹಿ ಸಂಗ್ರಹ ಸರಿಯಲ್ಲ : ಬಿ.ಸಿ.ಪಾಟೀಲ್
ಮೈಸೂರು : ಸಿಎಂ ಬಿ.ಎಸ್.ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹಿಸಲಾಗಿದೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಾಯಕತ್ವ ಬದಲಾವಣೆಗೆ ಸಮಯ ಇದಲ್ಲ. ಜೊತೆಗೆ ಪರ-ವಿರೋಧ ಸಹಿ ಸಂಗ್ರಹವೂ ಸರಿಯಲ್ಲ ಎಂದಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಚಿವರ ಸಭೆ ಕರೆಯಲಾಗಿದೆ.
ನಾನೂ ಸಭೆಗೆ ಹೋಗುತ್ತಿದ್ದೇನೆ. ಅಲ್ಲಿ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿ ಮಾತನಾಡುವ ಬಗ್ಗೆ ಮಾಹಿತಿ ಇಲ್ಲ. ಈಗ ಸಚಿವರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವ ಸಮಯವಲ್ಲ.
ಕೊರೊನಾದಿಂದ ಇಡೀ ಜಗತ್ತೇ ಸಂಕಷ್ಟಕ್ಕೆ ಸಿಲುಕಿದೆ. ಇದು ಮುಗಿದ ನಂತರ ಮಾತನಾಡಬಹುದು. ಇಂದು ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದಲ್ಲಿರುವ ಗೊಂದಲಗಳನ್ನು ಬಗೆಹರಿಸಲಿದ್ದಾರೆ ಎಂದರು.
ಇದೇ ವೇಳೆ ಹೊರಗಿನಿಂದ ಬಂದವರಿಂದಲೇ ಗೊಂದಲ ಸೃಷ್ಠಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಮೊದಲಿ
ನಿಂದಲೂ ನಮ್ಮ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಮನೆಗೆ ಸೊಸೆ ಬಂದ ನಂತರ ಅವಳು ಮನೆ ಮಗಳೇ ಎಂದು ಟಾಂಗ್ ನೀಡಿದರು.
ಸಹಿ ಸಂಗ್ರಹ ಬಗ್ಗೆ ಮಾತನಾಡಿ, ನಾಯಕತ್ವ ಬದಲಾವಣೆ ಬಗ್ಗೆ ಪರ-ವಿರೋಧ ಸಹಿ ಸಂಗ್ರಹ ಸರಿಯಲ್ಲ. ನನ್ನನ್ನು ಈ ವಿಚಾರದಲ್ಲಿ ಯಾರೂ ಸಂಪರ್ಕಿಸಿಲ್ಲ.
ಈಗ ಸರ್ಕಾರದಲ್ಲಿ ಬಾಂಬೆ ಟೀಮ್ ಎಂಬುವುದು ಇಲ್ಲ. ಸರ್ಕಾರದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮುಖ್ಯವಾಗಿ ಗೊಂದಲಗಳಿದ್ದರೆ, ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದು ಬೇಡ ಎಂದು ಬಿ.ಸಿ.ಪಾಟೀಲ್ ಹೇಳಿದರು.










