ಕಾಂಗ್ರೆಸ್ ನವರ ಅರ್ಜಿ ಸೇಲ್ ಆಗುತ್ತಿಲ್ಲ : ಡಿಕೆಶಿಗೆ ಬಿಸಿಪಾ ಟಾಂಗ್
ಬೆಂಗಳೂರು : 17 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ವಾಪಸ್ ಬರಬಹುದು ಎಂಬ ಡಿಕೆಶಿ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಟಾಂಗ್ ನೀಡಿದ್ದು, ಡಿಕೆಶಿ ಕನಸು ಕಾಣುತ್ತಿದ್ದಾರೆ. ಅವರ ಕನಸು ಈಡೇರಲ್ಲ. ಈಗ ಕಾಂಗ್ರೆಸ್ ನವರ ಅರ್ಜಿ ಸೇಲ್ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ತಟ್ಟೆಯಲ್ಲೇ ಕತ್ತೆ ಸತ್ತು ಬಿದ್ದಿದೆ, ಅದನ್ನು ನೋಡೋದು ಬಿಟ್ಟು ನಮ್ಮ ತಟ್ಟೆಯಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಮುಂದಾಗಿದ್ದಾರೆ. ಮೊದಲು ಸಿದ್ದರಾಮಯ್ಯ ಮತ್ತು ಅವರ ಕಿತ್ತಾಟ ಸರಿ ಮಾಡಿಕೊಳ್ಳಲಿ. ನಾವು ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸಿಎಂ ಜೊತೆ ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಮಾತನಾಡಿ, ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರು, ರಾಘವೇಂದ್ರ ಸಂಸದರು. ಅದಕ್ಕಾಗಿ ಅವರು ಸಿಎಂ ಜೊತೆ ಹೋಗಿದ್ದಾರೆ. ಸಿಎಂಗೆ ಎಲ್ಲ ಇಲಾಖೆಗಳ ಮಾಹಿತಿ ಕೂಡ ಇದೆ. ಸಾಕಷ್ಟು ಬಾರಿ ಅವರು ನಮ್ಮ ಜೊತೆಗೆ ಸಭೆಗಳನ್ನು ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಎಲ್ಲವನ್ನು ತಿಳಿದುಕೊಂಡೇ ದೆಹಲಿಗೆ ಹೋಗಿದ್ದಾರೆ ಎಂದರು.









