ಬೆಂಗಳೂರು: ದೇಶದ ಸಂವಿಧಾನವನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಿರುವ ಆರೆಸ್ಸೆಸ್ ಮತ್ತು ಬಲಪಂಥೀಯ ಶಕ್ತಿಗಳ ವಿರುದ್ಧ ಹೋರಾಡಲು ಈಗ ದೇಶಕ್ಕೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಗಂಭೀರ ಕರೆ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಸ್‍ಐಆರ್ ವಿರೋಧಿ ಒಕ್ಕೂಟ ಹಮ್ಮಿಕೊಂಡಿದ್ದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೇ ಇಲ್ಲದ ಆರೆಸ್ಸೆಸ್ ನಾಯಕರು, ಇಂದು ಸಂವಿಧಾನವನ್ನು ಮೊಟಕುಗೊಳಿಸಲು ಎಲ್ಲಾ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಹೋರಾಟ ಕೇವಲ ಒಬ್ಬ ಮುಖ್ಯಮಂತ್ರಿಯಿಂದ ಸಾಧ್ಯವಿಲ್ಲ, ಇದಕ್ಕಾಗಿ ಇಡೀ ದೇಶವೇ ಎದ್ದುನಿಲ್ಲುವ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದಂತಹ ದೇಶದ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯ ವಿಚಾರಧಾರೆಯವರೇ ತುಂಬಿಕೊಂಡಿದ್ದಾರೆ. ಚುನಾವಣಾ ಆಯೋಗದ ಜ್ಞಾನೇಶ್ ಕುಮಾರ್ ಅಂತಹ ಅಧಿಕಾರಿಗಳು ಜನಪ್ರತಿನಿಧಿಗಳನ್ನೇ ಭೇಟಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದರೆ, ಇವರಿಂದ ನ್ಯಾಯಯುತ ಮತ್ತು ಪಾರದರ್ಶಕ ಮತದಾನವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ತಮ್ಮ ರಾಜಕೀಯ ಜೀವನದ ಕಹಿ ಅನುಭವಗಳನ್ನು ಹಂಚಿಕೊಂಡ ಅವರು, ನಾನು ರಾಜಕೀಯಕ್ಕೆ ಬಂದಿರುವುದೇ ಭೇದಭಾವಗಳನ್ನು ತೊಡೆದು ಹಾಕಲು. ವಿದ್ಯಾರ್ಥಿ ದೆಸೆಯಿಂದಲೂ ಅನ್ಯಾಯಗಳನ್ನು ಹತ್ತಿರದಿಂದ ಕಂಡಿದ್ದೇನೆ. ಅದರಲ್ಲೂ ವಿಶೇಷವಾಗಿ ಚುನಾವಣಾ ಬೂತ್‍ಗಳಲ್ಲಿ ದಲಿತರು ಮತ್ತು ತಳಸಮುದಾಯದವರ ಮತಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕುತ್ತಿದ್ದ ದೃಶ್ಯಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ವಿಷಾದಿಸಿದರು.
ಸಂವಿಧಾನ ವಿರೋಧಿ ಶಕ್ತಿಗಳು ದೇಶದ ಏಕತೆಯನ್ನು ಒಡೆಯಲು ಹೊಂಚು ಹಾಕುತ್ತಿದ್ದಾರೆ. ಇವರೇ ದೊಡ್ಡ ದೇಶಪ್ರೇಮಿಗಳು ಎಂಬಂತೆ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಅಂದಿನ ಕಾಲದ ರಾಜರು ಮತ್ತು ಮಂತ್ರಿಗಳು ದೇಶದ ಶ್ರಮಿಕ ವರ್ಗವನ್ನು ನಿರ್ಲಕ್ಷಿಸಿದ್ದರಿಂದಲೇ ದೇಶ ಲೂಟಿಯಾಯಿತು. ಇಂದು ಅದೇ ತಪ್ಪು ಮರುಕಳಿಸುತ್ತಿದೆ. ಬಿಜೆಪಿಯ ಇಂತಹ ಜನವಿರೋಧಿ ನೀತಿಗಳು ಮುಂದುವರಿದರೆ, ಭವಿಷ್ಯದಲ್ಲಿ ದೇಶವನ್ನು ರಕ್ಷಿಸಲು ಜನರೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಕಿಡಿಕಾರಿದ ಅವರು, ಮೋದಿ ಸರ್ಕಾರ ಜನಸಾಮಾನ್ಯರನ್ನು ತಮ್ಮ ಗುರುತು ಮತ್ತು ಅರ್ಹತೆಯನ್ನು ಸಾಬೀತುಪಡಿಸಲು ದಾಖಲೆಗಳನ್ನು ಕೇಳುತ್ತದೆ. ಆದರೆ ಇಡೀ ದೇಶಕ್ಕೆ ಆದರ್ಶವಾಗಬೇಕಾದ ಪ್ರಧಾನ ಮಂತ್ರಿಗಳು ಮಾತ್ರ ತಮ್ಮ ಪದವಿ ಪ್ರಮಾಣಪತ್ರವನ್ನೇ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಂವಿಧಾನದ ಉಳಿವಿಗಾಗಿ ಮತ್ತು ತಳಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ದೊಡ್ಡ ಮಟ್ಟದ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ಹರಿಪ್ರಸಾದ್ ಸಮಾವೇಶದಲ್ಲಿ ಕರೆ ನೀಡಿದರು.







