ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುತ್ತಾರೆ : ಸಿದ್ದಲಿಂಗ ಸ್ವಾಮೀಜಿ
ವಿಜಯಪುರ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಲ್ಲಿ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ದೂರಾಗುತ್ತಾರೆ ಎಂದು ಇಂಗಳೇಶ್ವರ ವಚನಾಶಿಲಾ ಮಂಟಪ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ ಎಚ್ಚರಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಯಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುವ ಸಾಧ್ಯತೆ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಲ್ಲಿ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ದೂರಾಗುತ್ತಾರೆ.
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು 40-50 ವರ್ಷಗಳವರೆಗೆ ಅಲೆದಾಡಿ ಪಕ್ಷ ಸಂಘಟಿಸುವ ಜೊತೆಗೆ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ.
ಇದೀಗ ಅವರನ್ನು ನಡೆಸಿಕೊಳ್ಳುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದರು.
ಇನ್ನು ಈ ಹಿಂದೆ ವಿರೇಂದ್ರ ಪಾಟೀಲರು 185ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿ ಮುಖ್ಯಮಂತ್ರಿಯಾದ ನಂತರ ಕೇಂದ್ರದವರು ಸರಿಯಾಗಿ ನಡೆಸಿಕೊಳ್ಳದ ಕಾರಣದಿಂದ ಲಿಂಗಾಯತರು ಹಾಗೂ ಲಿಂಗಾಯತ ಬೆಂಬಲಿತ ಸಮಾಜದವರು ಕಾಂಗ್ರೆಸ್ ಪಕ್ಷದಿಂದ ದೂರಾದರು.
ಅದೇ ರೀತಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರೇ ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುತ್ತಾರೆ ಎಂದು ವಾರ್ನಿಂಗ್ ನೀಡಿದರು.










