ಧರ್ಮ ಸಂಕಟದಲ್ಲಿ ಹೈಕಮಾಂಡ್ : ಬಿಎಸ್ ವೈ ರಾಜೀನಾಮೆ ಡೌಟು..!
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಇಂದು ಅಥವಾ ನಾಳೆ ನಿರ್ಧಾರವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಆದೇಶ ಪಾಲಿಸುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದಿದ್ದಾರೆ. ಇದೀಗ ಚೆಂಡು ಬಿಜೆಪಿ ಬಿಗ್ ಬಾಸ್ ಗಳ ಅಂಗಳದಲ್ಲಿದ್ದು, ಯಾವು ನಿರ್ಧಾರ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಆದ್ರೆ ದೆಹಲಿ ವರಿಷ್ಠರು ಈ ಬಗ್ಗೆ ಇನ್ನೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ.
ಧರ್ಮ ಸಂಕಟದಲ್ಲಿ ಹೈಕಮಾಂಡ್..
ಹೌದು..! ಮೋದಿ-ಶಾ ಜೋಡಿ ಬೇರೆ ರಾಜ್ಯಗಳಲ್ಲಿ ಮಾಡಿದ ರಾಜಕೀಯ ವಿಪ್ಲವವನ್ನು ಕರ್ನಾಟಕದಲ್ಲಿ ಮಾಡಲು ತುಸು ಹಿಂದೇಟು ಹಾಕುತ್ತಿದೆ. ಇತರೆ ರಾಜ್ಯಗಳಲ್ಲಿ ಆಡಿದ ರಾಜಕೀಯ ಆಟ ಕರ್ನಾಟಕದಲ್ಲಿ ಆಡಲು ಬಿಜೆಪಿ ಬಿಗ್ ಬಾಸ್ ಗಳಿಗೆ ಆಗುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಯಾಕೆಂದ್ರೆ ಕರ್ನಾಟಕದ ರಾಜಕೀಯ ವ್ಯವಸ್ಥೆಯೇ ಬೇರೆ, ಇತರೆ ರಾಜ್ಯಗಳ ರಾಜಕೀಯ ವ್ಯವಸ್ಥೆಯೇ ಬೇರೆ.
ಮುಖ್ಯವಾಗಿ ಹೈಕಮಾಂಡ್ ಗೆ ಈವರೆಗೂ ಬಿಎಸ್ ವೈಗೆ ಪರ್ಯಾಯವಾಗಿರುವ ಉತ್ತರಾಧಿಕಾರಿ ಸಿಕ್ಕೇ ಇಲ್ಲ. ಬಿಎಸ್ ವೈರಂತೆ ಪಕ್ಷವನ್ನು ಸಂಘಟಿಸಬಲ್ಲ, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಚಾಣಾಕ್ಷಣ ಹುಡುಕಾಟದಲ್ಲಿ ಹೈಕಮಾಂಡ್ ಇದೆ. ಆದ್ರೆ ಹೈಕಮಾಂಡ್ ಗೆ ಇದು ಕಬ್ಬಿಣದ ಕಡಲೆಯಾದಂತಿದೆ.
ಸ್ವಾಮೀಜಿಗಳ ಎಚ್ಚರಿಕೆ… ಲಿಂಗಾಯತರು ದೂರವಾಗುವ ಭಯ
ಬಿಎಸ್ ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಹಾಗೇ ಅವರಿಗೆ ರಾಜ್ಯದಲ್ಲಿರುವ ಸಾಕಷ್ಟು ಮಠಗಳ ಮಠಾಧೀಶರ ಬೆಂಬಲವೂ ಕೂಡ ಇದೆ. ಬಿಎಸ್ ವೈರನ್ನು ಕೆಳಗಿಳಿಸಿದ್ದೇಯಾದ್ದಲ್ಲಿ ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುವ ಎಚ್ಚರಿಕೆ ನೀಡಿದ್ದಾರೆ. ಇದು ಸಹಜವಾಗಿಯೇ ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂದಿರುವ ಬಿಜೆಪಿಗೆ ತಲೆನೋವು ಉಂಟು ಮಾಡಿದೆ.
ಸದ್ಯದ ಪ್ರವಾಹ ಪರಿಸ್ಥಿತಿ
ರಾಜ್ಯದಲ್ಲಿ ಸದ್ಯ ವರುಣನ ಆರ್ಭಟ ಮುಂದುವರೆದಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದ್ರೆ ಜನರಗೆ ತಪ್ಪು ಸಂದೇಶ ಹೋಗುತ್ತದೆ. ಜೊತೆಗೆ ಈಗ ಸಿಎಂ ರಾಜೀನಾಮೆ ನೀಡಿದ್ರೂ ಮತ್ತೆ ಸಂಪುಟ ರಚನೆ, ಖಾತ ಹಂಚಿಕೆ ವಿಳಂಬವಾಗುತ್ತದೆ. ಈ ಎಲ್ಲ ಕಾರಣಗಳಿಂದ ಹೈಕಮಾಂಡ್ ಸದ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ಕೇಳುವುದಿಲ್ಲ ಎಂದು ರಾಜಕೀಯ ಪಂಡಿತರ ಮಾತಾಗಿದೆ.










