ಹಿತಶತ್ರುಗಳ ವಿರುದ್ಧ “ಬಿಎಸ್ ವೈ ಕಟೀಲಾಸ್ತ್ರ” : ಆಡಿಯೋ ಮರ್ಮಾ.. ಕಾವಿ ಗುರಾಣಿ
ನಾಯಕತ್ವ ಬದಲಾವಣೆ ವಿಚಾರ ರಾಜ್ಯದಲ್ಲಿ ಬೆಂಕಿ ಬಿರುಗಾಳಿಯನ್ನು ಎಬ್ಬಿಸಿದೆ. ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆ ಅನ್ನೋ ಸುದ್ದಿ ರಾಜ್ಯದಲ್ಲಿ ಸಂಚಲನ ಸೃಷ್ಠಿ ಮಾಡಿದೆ. ಮೇಲ್ನೊಟಕ್ಕೆ ಹೈಕಮಾಂಡ್ ನ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆ ಬಾಗಿದ್ದಾರೆ ಎಂದು ಕಾಣುತ್ತಿದ್ದರೂ, ಕಾವಿ ಗುರಾಣಿ ಮೂಲಕ ರಾಜಕೀಯ ಆಟ ಶುರು ಮಾಡಿದ್ದಾರೆ.
ಹಿತಶತ್ರುಗಳ ವಿರುದ್ಧ “ಬಿಎಸ್ ವೈ ಕಟೀಲಾಸ್ತ್ರ”
ಹೌದು..! ಮುಖ್ಯಮಂತ್ರಿ ಬಿಎಸ್ ವೈ ದೆಹಲಿ ಪ್ರವಾಸ ಮುಗಿಸಿ ಬರುತ್ತಿದ್ದಂತೆ ನಾಯಕತ್ವ ಬದಲಾವಣೆ ವಿಚಾರಕ್ಕೆ ರೆಕ್ಕೆಪುಕ್ಕಗಳು ಬಂದಿವೆ. ಪಕ್ಷದ ಬಿಗ್ ಬಾಸ್ ಗಳು ಬಿ ಎಸ್ ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬ್ಲೂ ಪ್ರಿಂಟ್ ರೆಡ್ಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನ ಅರಿತಿರುವ ಯಡಿಯೂರಪ್ಪ ಮೇಲ್ನೋಟಕ್ಕೆ ಹೈಕಮಾಂಡ್ ವಿಧೇಯನಾಗಿದ್ದುಕೊಂಡೇ ರಾಜಕೀಯ ದಾಳ ಉರುಳಿಸಿದ್ದಾರಾ..? ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ. ಯಾಕಂದ್ರೆ ಸದ್ಯ ಚರ್ಚೆಗೆ ಕಾರಣವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ಹಿಂದೆ ಬಿಎಸ್ ವೈ ರಾಜಕೀಯ ತಂತ್ರ ಇದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಕಟೀಲ್ ಆಡಿಯೋದಲ್ಲಿ ಶೆಟ್ಟರ್, ಈಶ್ವರಪ್ಪ ಟೀಂ ಅನ್ನು ಗುರಿಯಾಗಿಸಿಕೊಂಡು ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ಸಿಎಂ ಬದಲಾವಣೆ ಮಾಡೋದಾದ್ರೆ ಶೆಟ್ಟರ್, ಈಶ್ವರಪ್ಪಗೆ ಯಾಕೆ ಕೋಕ್ ಕೊಡಬೇಕು..? ಅದರಲ್ಲೂ ಶೆಟ್ಟರ್, ಈಶ್ವರಪ್ಪ ಅವರ ಪಕ್ಷ ನಿಷ್ಠೆಯಲ್ಲಿ ಯಾವುದೇ ಲೋಪವಿಲ್ಲ. ಪಕ್ಷ ಕಾಲಲ್ಲಿ ತೋರಿಸುವ ಕೆಲಸವನ್ನು ಈ ಇಬ್ಬರು ತಲೆ ಮೇಲೆ ಹೊತ್ತಿಕೊಂಡು ಮಾಡುತ್ತಾರೆ. ಇಂತಹ ನಾಯಕರ ಬಗ್ಗೆ ಕಟೀಲ್ ಮಾತನಾಡಿದ್ದೇಕೆ ಅನ್ನೋ ಪ್ರಶ್ನೆ ಸದ್ಯ ರಾಜಕೀಯ ಪಂಡಿತರಲ್ಲಿ ಕಾಡುತ್ತಿದೆ.
ಸಿಎಂ ಬದಲಾವಣೆಗೆ ಶೆಟ್ಟರ್, ಈಶ್ವರಪ್ಪ ಕುಮ್ಮಕ್ಕು
ಶೆಟ್ಟರ್, ಈಶ್ವರಪ್ಪ ಬಹಿರಂಗವಾಗಿ ಎಲ್ಲರೆದುರು ಬಿಎಸ್ ವೈಗೆ ಜೈ ಎನ್ನುತ್ತಿದ್ದರೂ ಅವರ ಕುರ್ಚಿ ಕೆಡವಲು ಈ ಇಬ್ಬರು ನಾಯಕರು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ವಿರುದ್ಧ ಈಶ್ವರಪ್ಪಗೆ ಮುನಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇತ್ತ ಶೆಟ್ಟರ್ ಉತ್ತರ ಕರ್ನಾಟಕದವರಿಗೆ ಸಿಎಂ ಪಟ್ಟ ಸಿಗಬೇಕು ಅನ್ನೋ ಕಾರಣದಿಂದ ಬಿಎಸ್ ವೈ ಖೆಡ್ಡಾ ತೋಡುತ್ತಿದ್ದಾರೆ ಅನ್ನೋದು ಬಿಜೆಪಿ ಪಡಸಾಲೆಯಲ್ಲಿ ಸುತ್ತುತ್ತಿರುವ ಸುದ್ದಿ.
ಈ ಕಾರಣಕ್ಕಾಗಿ ಹಾಗೂ ಬಿಜೆಪಿ ಬಿಗ್ ಬಾಸ್ ಗಳಿಗೆ ತಮ್ಮ ತಾಕತ್ತು ತೋರಿಸಲು ಬಿಎಸ್ ಯಡಿಯೂರಪ್ಪ ಕಟೀಲಾಸ್ತ್ರ ಪ್ರಯೋಗಿಸಿದ್ದಾರಾ ಅನ್ನೋ ಪ್ರಶ್ನೆಗೆ ನಾಂದಿಯಾಡಿದೆ. ಯಾಕಂದ್ರೆ ಸಿಎಂ ದೆಹಲಿಯಿಂದ ಬರುತ್ತಿದ್ದಂತೆ ಕಟೀಲ್ ಆಡಿಯೋ ವೈರಲ್ ಆಯ್ತು. ಇದರ ಬೆನ್ನಲ್ಲೆ ಸಿಎಂ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೂ ಬಿಎಸ್ ವೈ ಮಾತ್ರ ಎಲ್ಲೂ ತುಟಿ ಬಿಚ್ಚಿಲ್ಲ. ಇದಕ್ಕೆ ಕಾರಣವೇನು..?
ಕಟೀಲ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಲ್ಲ ಯಾಕೆ..? ಅನ್ನೋ ಪ್ರಶ್ನೆಯ ಜೊತೆಗೆ ಈ ಆಡಿಯೋವನ್ನು ಬಳಸಿಕೊಂಡು ತಮ್ಮ ವಿರೋಧಿಗಳಿಗೆ ಸಿಎಂ ಚೆಕ್ ಮೇಟ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಬತ್ತಳಿಕೆಯಲ್ಲಿದ್ದ ಕಾವಿ ಅಸ್ತ್ರವನ್ನು ಮುಂದೆ ಬಿಟ್ಟು ರಾಜಕೀಯ ತಂತ್ರ ರೂಪಿಸಿ, ಪಕ್ಷದ ಹೈಕಮಾಂಡ್ ಮತ್ತು ವಿರೋಧಿಗಳಿಗೆ ತಮ್ಮನ್ನ ಸಿಎಂ ಸ್ಥಾನದಿಂದ ಕೆಳಗಿಳಿಸೋದು ಸುಲಭವಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರಾ ಯಡಿಯೂರಪ್ಪ ಕುತೂಹಲಕಾರಿ ಪ್ರಶ್ನೆ ಕಾಡುತ್ತಿದೆ.