ಕೊರೊನಾದಿಂದ ದೇಶದಲ್ಲಿ ಆರ್ಥಿಕ ಕುಸಿತ ಕಂಡಿಲ್ವಂತೆ : ಕಟೀಲ್ ಹೇಳಿದ್ದು
ಹಾವೇರಿ : ದೇಶದಲ್ಲಿ ಕೊರೊನಾ ಒಂದನೆ ಅಲೆ ಬಂದಾಗಲೂ ಆರ್ಥಿಕ ಕುಸಿತ ಕಾಣಲಿಲ್ಲ. ಈಗಲೂ ಆರ್ಥಿಕ ಕುಸಿತ ಕಂಡಿಲ್ಲ ಎಂದು ರಾಜ್ಯ ಬಿಜೆಪಿ ಸಾರಥಿ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ತೈಲ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಕಟೀಲ್, ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇರುವುದು ಟೀಕೆ ಮಾಡುವುದಕ್ಕಾಗಿದೆ.
ವಿರೋಧ ಮಾಡುವುದು ಅವರ ಪಾರ್ಟಿ ಗುಣ ಆಗಿದೆ. ದೇಶದಲ್ಲಿ ಕೋವಿಡ್ ನಿಯಂತ್ರಣ ಮಾಡೋ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಒಂದನೆ ಅಲೆ ಬಂದಾಗಲೂ ಆರ್ಥಿಕ ಕುಸಿತ ಕಾಣಲಿಲ್ಲ.
ಈಗಲೂ ಆರ್ಥಿಕ ಕುಸಿತ ಕಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಪರೀತ ಬೆಲೆ ಏರಿಕೆ ಇತ್ತು. ಆಗ ಯಾವುದೇ ಕೋವಿಡ್ ಇರಲಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿಎಂ ರಾಜೀನಾಮೆ ಹೇಳಿಕೆ ಬಗ್ಗೆ ಮಾತನಾಡಿ, ಮುಖ್ಯಮಂತ್ರಿಯ ಬದಲಾವಣೆ, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ಚರ್ಚೆಗಳು ಅಪ್ರಸ್ತುತ.
ಯಡಿಯೂರಪ್ಪನವರು ಬಹಳ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದಾರೆ. ಭಾರತೀಯ ಜನತಾ ಪಾರ್ಟಿಯ ವಿಶಿಷ್ಟತೆ ಅದು. ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಯಾರೂ ಅಧಿಕಾರಕ್ಕಾಗಿ ಅಂಟಿ ಕೂತವರಲ್ಲ.
ಪಾರ್ಟಿಯ ಸೂಚನೆಯ ಆಧಾರದ ಮೇಲೆ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಯಡಿಯೂರಪ್ಪ ನಮ್ಮೆಲ್ಲ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿ ಹೇಳಿದ್ದಾರೆ ಎಂದರು.