B. Sriramulu | ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ
ಬಳ್ಳಾರಿ : ಕಾಲ ಬದಲಾಗಿದೆ. ಸುಳ್ಳಿನ ಮೇಲೆ ರಾಜಕೀಯ ಮಾಡುವುದು, ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯುತ್ತಿದೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಶ್ರೀರಾಮುಲು, ಬಳ್ಳಾರಿ ಜಿಲ್ಲೆ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಯೇ ದೊಡ್ಡದು. ಅದು ಜಿಲ್ಲೆಯ ಜನರಿಗೂ ಗೊತ್ತಿದೆ. ಹಾಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಬಂದು ಏನೇ ಮಾಡಿದರೂ ನಂಬುವುದಿಲ್ಲ. ಅವರಿಗೆ ವಾಸ್ತವದ ಮೇಲೆ ನಂಬಿಕೆಯೇ ಹೊರತು, ಬರೀ ನಾಟಕ ಮಾಡುವವರ ಮೇಲಲ್ಲ.
ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಆದವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಹಣ ಕೊಡದೆ, ಈಗ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಭಾಷಣ ಮಾಡುತ್ತೀರಿ.? ನಮ್ಮ ಜನ ಸ್ವಾಭಿಮಾನಿಗಳು. ಎಲ್ಲದಕ್ಕೂ ಹೌದು ಹುಲಿಯಾ , ಎನ್ನುವವರಲ್ಲ ಅಥವಾ ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ.
ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ ನೀಡುವ ರಾಜಕೀಯ ಪಕ್ಷ ಎಂಬುದು ಇತಿಹಾಸದಿಂದಲೇ ಋಜುವಾತಾಗಿದೆ.ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದಾಗಲೂ ಎಂದಿನಂತೆ ಮತ್ತೆ ಮತದಾರರಿಗೆ ಅದೇ ಮೋಸ, ವಂಚನೆ ಜನತೆಯ ಮೂಗಿಗೆ ತುಪ್ಪ ಸವರಿದ್ದು. ಈಗ ಭಾರತ್ ತೋಡೋ.
ಕಾಲ ಬದಲಾಗಿದೆ. ಸುಳ್ಳಿನ ಮೇಲೆ ರಾಜಕೀಯ ಮಾಡುವುದು, ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ. ಬರಲಿರುವ ದಿನಗಳಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲಿದ್ದಾರೆ ಎಂಬ ಸತ್ಯವನ್ನು ಕಾಂಗ್ರೆಸ್ ನಾಯಕರು ಮರೆಯಬಾರದು ಎಂದು ರಾಮುಲು ಕಿಡಿಕಾರಿದ್ದಾರೆ.