B Y Vijayendra | ಅಂಕಲ್ ಇದ್ದಾರೆ ಅನ್ನೋ ಅಧಮ್ಯ ನಂಬಿಕೆಯಲ್ಲಿ ವಿಜಯೇಂದ್ರ..
ಬಿಜೆಪಿಯಲ್ಲಿ ಯಡಿಯೂರಪ್ಪನವರ ಕೆಲವೇ ನಂಬಿಕೆಯ ನಿಕಟವರ್ತಿಗಳಲ್ಲಿ ಮೊದಲ ಸಾಲಿನಲ್ಲಿದ್ದವರು ಬಸವರಾಜ್ ಬೊಮ್ಮಾಯಿ.
ಬಿಎಸ್ವೈ ಅವರ ನಿಷ್ಠಾವಂತ ಆಜ್ಞಾಪಾಲಕ, ಹೀಗಾಗಿಯೇ ಯಡಿಯೂರಪ್ಪ ತಾವು ಬದಿಗೆ ಸರಿದು ಯಾರತ್ತನಾದ್ರೂ ಬೆರಳು ತೋರಿಸಿ ಸಿಎಂ ಮಾಡಬೇಕೆನ್ನುವ ಸನ್ನಿವೇಶ ಎದುರಾದಾಗ ಮತ್ತೊಂದು ಕ್ಷಣ ಯೋಚಿಸಿದೇ ಬಸವರಾಜ್ ಬೊಮ್ಮಾಯಿ ಹೆಸರನ್ನು ಫೈನಲ್ ಮಾಡಿಬಿಟ್ಟಿದ್ದರು.
ತಾವು ಸಿಎಂ ಆಗುತ್ತೇನೆ ಅನ್ನುವ ಕಿಂಚಿತ್ ಕಲ್ಪನೆಯೂ ಇರದಿದ್ದ ಬಸವರಾಜ್ ಬೊಮ್ಮಾಯಿಯವರಿಗೆ ಇದು ತಮ್ಮ ಗಾಡ್ ಫಾದರ್ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಹೊರಿಸಿದ ಋಣ ಭಾರ. ಇದಕ್ಕಾಗಿ ಅವರು ಬಿಎಸ್ವೈ ಉಂಗುಷ್ಟದಲ್ಲಿ ತೋರಿಸಿದ್ದನ್ನೂ ತಲೆಯ ಮೇಲೆ ಹೊತ್ತು ಮಾಡಲು ಸಿದ್ಧ.
ಈ ಹಿಂದೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಮಾಡಿದ್ದ ಜಗದೀಶ್ ಶೆಟ್ಟರ್ ಹಾಗೂ ಸದಾನಂದ ಗೌಡರು ವಿಶ್ವಾಸ ದ್ರೋಹವೆಸಗಿದ್ದು ಆನಂತರ ಆಲ್ ಮೋಸ್ಟ್ ನೇಪಥ್ಯಕ್ಕೆ ಸರಿದಿರುವ ಇತಿಹಾಸವನ್ನು ಬಸವರಾಜ ಬೊಮ್ಮಾಯಿ ಮರೆತಿಲ್ಲ.
ಹೀಗಾಗಿ ಅವರು ಯಡಿಯೂರಪ್ಪ ಎಂಡ್ ಫ್ಯಾಮಿಲಿಗೆ ಕಡೆಯತನಕವೂ ನಿಷ್ಠರಾಗಿಯೇ ಉಳಿಯುತ್ತಾರೆ. ಬಸವರಾಜ ಬೊಮ್ಮಾಯಿಯವರು ಕುಟುಂಬ ರಾಜಕಾರಣ ಮಾಡುವವರಲ್ಲ, ಇದಕ್ಕೆ ತಾಜಾ ಉದಾಹರಣೆಯೇ ಅವರ ಸುಪುತ್ರ ಭರತ್ ತಂದೆ ಸಿಎಂ ಆದರೂ ವಿಧಾನಸೌಧದ ಪಡಸಾಲೆಯಲ್ಲಿ ಕಾಣಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಬಸವರಾಜ್ ಬೊಮ್ಮಾಯಿಯವರ ಮೇಲಿನ ಯಡಿಯೂರಪ್ಪ ವಿಶ್ವಾಸವೂ ಸದ್ಯಕ್ಕೆ ಕ್ಷೀಣಿಸಿಲ್ಲ.
ಯಡಿಯೂರಪ್ಪನವರ ನಂತರ ಅವರ ಡೈನಾಸ್ಟಿಯನ್ನೂ, ಸಮಸ್ತ ಲಿಂಗಾಯಿತ ಕುಲಕೋಟಿಯನ್ನೂ ಮುನ್ನಡೆಸುವ ನಾಯಕ ಅವರ ಕುಟುಂಬದವರೇ ಆಗುತ್ತಾರೆ ಅನ್ನುವುದನ್ನು ಬೊಮ್ಮಾಯಿ ದಿ ಜ್ಯೂನಿಯರ್ ಚೆನ್ನಾಗಿ ಬಲ್ಲರು.
ಹೀಗಾಗಿಯೇ ವಿಜಯೇಂದ್ರ ಹೆಸರು ಚಾಲ್ತಿಗೆ ಬಂದಂತೆಲ್ಲಾ ಬೊಮ್ಮಾಯಿಗೆ ಧರ್ಮ ಸಂಕಟ ಶುರುವಾಗುತ್ತದೆ. ಸದ್ಯ ವಿಜಯೇಂದ್ರರ ಪರವಾಗಿ ಬಸವರಾಜ ಬೊಮ್ಮಾಯಿ ನಿಲ್ಲಲೇಬೇಕು; ಆದರೆ ಹೈಕಮಾಂಡ್ ಅದನ್ನು ಇಷ್ಟಪಡುವುದಿಲ್ಲ.
ಹೀಗಾಗಿಯೇ ಸಾಧ್ಯವಾದಷ್ಟು ಸಂಪುಟ ವಿಸ್ತರಣೆಯನ್ನೇ ಮುಂದೂಡುತ್ತಾ ಬರುತ್ತಿದ್ದಾರೆ ಮುಖ್ಯಮಂತ್ರಿಗಳು. ಇಷ್ಟಾದ ಮೇಲೂ ಅಂತಿಮವಾಗಿ ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು ಅನ್ನುವ ಹೊಣೆಯನ್ನು ಅವರು ಮರೆಯುವಂತಿಲ್ಲ.
ಜೊತೆಗೆ ಮಿಷನ್-೨೩ ವಿಧಾನಸೌಧ ಯೋಜನೆಗೆ ಅವರು ಪೂರಕವಾಗಿ ಇರದಿದ್ದರೂ ಮಾರಕವಾಗಲಾರರು ಅನ್ನುವುದೇ ರಾಜಾಹುಲಿ ಎಂಡ್ ಸನ್ ಅವರಿಗಿರುವ ಅಪರಿಮಿತಿ ವಿಶ್ವಾಸ.
-ವಿಪ್ರಭಾ