ಕಾಂಗ್ರೆಸ್ ಕಿತ್ತಾಟಕ್ಕೆ ರಾಜ್ಯದ ಜನ ಹಾಸ್ಯ ಮಾಡಿ ನಗ್ತಿದ್ದಾರೆ : ಬಿ ವೈ ವಿಜಯೇಂದ್ರ
ಬಾಗಲಕೋಟೆ : ಮುಂಬರುವ ವಿಧಾನಸಭಾ ಚುನಾವಣೆಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಟೀಕೆ ಮಾಡ್ತಿದ್ದಾರೆ..
ಬಾಗಲಕೋಟೆಯ ಇಳಕಲ್ ನಗರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಬಗ್ಗೆ ಮಾತನಾಡ್ತಾ ಸಿಎಂ ಸ್ಥಾನಕ್ಕೆ ಬೀದಿ ನಾಟಕ ಎನ್ನುವಂತೆ ಕಾಂಗ್ರೆಸ್ ನಡುವಳಿಕೆ ಪರಿವರ್ತನೆ ಇದೆ ಎಂದು ವ್ಯಂಗ್ಯವಾಡಿದ್ದಾರೆ..
ಅಲ್ಲದೇ ಕಾಂಗ್ರೆಸ್ ಕಿತ್ತಾಟಕ್ಕೆ ರಾಜ್ಯದ ಜನ ಹಾಸ್ಯ ಮಾಡಿ ನಗ್ತಿದ್ದಾರೆ. ಬಿಜೆಪಿಗೆ ಕೇಂದ್ರದಲ್ಲಿ ದಿಟ್ಟ ನಾಯಕತ್ವ ಇದೆ. ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ರೀತಿ ಜನಪರ ಆಡಳಿತ ಕೊಡ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ.
ಇನ್ನೂ ರಾಜ್ಯದಲ್ಲಿ ಜಾತಿ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು ಇದು ದುರಾದೃಷ್ಟ. ಅಣ್ಣ ಬಸವಣ್ಣನವರ ನಾಡಾದ ಕರ್ನಾಟಕದಲ್ಲಿ ಜಾತಿ ರಾಜಕಾರಣ ಸರಿಯಲ್ಲ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂದವರು ಬಸವಣ್ಣ. ರಾಜ್ಯದಲ್ಲಿ ಆ ರೀತಿ ಆಡಳಿತ ಕೊಟ್ಟವರು ದೇವರಾಜ ಅರಸು.
ಅರಸು ನಂತರ ತುಳಿತಕ್ಕೆ ಒಳಗಾದ ಸಮಾಜಗಳಿಗೆ, ರೈತರು, ದಲಿತರು, ಹಿಂದುಳಿದವರ ಪರ ಆಡಳಿತ ನೀಡಿದ್ದು ಯಡಿಯೂರಪ್ಪ ಅವರು.
ಆ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಅವರನ್ನ ಜನನಾಯಕ ಎಂದು ಜನರು ಒಪ್ಪಿರುವಂತದ್ದು. ಹೀಗಾಗಿ ಜಾತಿ ಆಧಾರಿತವಾಗಿ ಚುನಾವಣೆ ಗೆಲ್ಲುತ್ತೇವೆ, ಅಧಿಕಾರ ಹಿಡಿಯುತ್ತೇವೆ ಎನ್ನುವುದು ಭ್ರಮೆ.
ಬಿಜೆಪಿ ಎಲ್ಲ ಜಾತಿ, ಎಲ್ಲ ವರ್ಗ, ಎಲ್ಲ ಜಾತಿ, ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಕ್ಕೆ ಬರುತ್ತೇವೆ ಎಂದಿದ್ಧಾರೆ..








