ಹೈದರಾಬಾದ್ : ತೆಲಂಗಾಣದ ಮೆಡಕ್ ಜಿಲ್ಲೆಯಲ್ಲಿ 120 ಅಡಿ ಆಳದ ಬೋರ್ ವೆಲ್ಗೆ ಬಿದ್ದಿದ್ದ ಮೂರು ವರ್ಷದ ಮಗು ಮೃತಪಟ್ಟಿದೆ. ಮೃತ ಬಾಲಕನನ್ನು ಸಾಯಿ ವರ್ಧನ್ ಎಂದು ಗುರುತಿಸಲಾಗಿದೆ. ಸಾಯಿ ಬುಧವಾರ ರಾತ್ರಿ ಮೆಡಕ್ ಜಿಲ್ಲೆಯ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್ ವೆಲ್ಗೆ ಬಿದ್ದಿದ್ದ. ಮಾಹಿತಿ ತಿಳಿದು ಎನ್ಡಿಆರ್ಎಫ್ ತಂಡವೂ ಸ್ಥಳಕ್ಕೆ ಬಂದು 120 ಅಡಿ ತೆರೆದ ಬೋರ್ ವೆಲ್ ಗೆ ಆಮ್ಲಜನಕ ಸರಬರಾಜು ಮಾಡಿದೆ. ಅಲ್ಲದೇ ಬಾಲಕನನ್ನು ರಕ್ಷಿಸಲು ಪಕ್ಕದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಆದರೆ ಬಾಲಕನಿಗೆ ಸರಿಯಾಗಿ ಆಮ್ಲಜನಕ ಸಿಗದೆ ಮೃತಪಟ್ಟಿದ್ದು, ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಬಾಲಕ ಬೋರ್ ವೆಲ್ ಗೆ ಬಿದ್ದ ತಕ್ಷಣ ತಾಯಿ ತಾನುಟ್ಟಿದ್ದ ಸೀರೆಯನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಇಳಿಸಿದ್ದಾರೆ. ಅದನ್ನು ಹಿಡಿದುಕೊಂಡು ಮಗು ಮೇಲಕ್ಕೆ ಬರಬಹುದು ಎಂದು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಬಾವಿಯೊಳಗೆ ಆಳದವರೆಗೆ ಹೋಗಿದ್ದು, ಸೀರೆಯನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ.
ಸದ್ಯಕ್ಕೆ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.








