ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಕಾಟ ಹೆಚ್ಚಾಗುತ್ತಿದ್ದು, ರಾಕೆಟ್ ರೀತಿಯಲ್ಲಿ ಜನರಿಗೆ ಸೋಂಕು ಹರಡುತ್ತಿದೆ. ಈ ಹೆಮ್ಮಾರಿ ವೈರಸ್ ಗೆ ಸೂಕ್ತ ಔಷಧ ಕಂಡು ಹಿಡಿಯಲು ವೈದ್ಯರು ನಾನಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದ್ರೆ ಈವರೆಗೂ ಔಷಧ ದೊರಕಿಲ್ಲ. ಇದೇ ಕಾರಣಕ್ಕಾಗಿ ವಿಶ್ವ ಸಂಸ್ಥೆ ಕೂಡ ಕೊರೊನಾದೊಂದಿಗೆ ಎಚ್ಚರದಿಂದ ಬದುಕಿ ಎನ್ನುತ್ತಿದೆ. ಇಂತಹ ಪರಿಸ್ಥತಿಯಲ್ಲಿ ನಾವು ಜೀವ ಮತ್ತು ಜೀವನವನ್ನು ಬಹಳ ಎಚ್ಚರಿಕೆಯಿಂದ ಸಾಗಿಸಬೇಕು.
ಇನ್ನು ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೊರೊನಾ ಬಗ್ಗೆ ಜನರಲ್ಲಿ ಜಾಗೃತೆ ಮೂಡಿಸಲು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ, ಹಾಡೊಂದನ್ನು ನಿರ್ಮಿಸುತ್ತಿದೆ. ಈ ಹಾಡಿನಲ್ಲಿ ಚಂದನವನದ ಸ್ಟಾರ್ ಗಳಾದ ಶಿವಣ್ಣ, ಪುನೀತ್, ದರ್ಶನ್, ರವಿಚಂದ್ರನ್, ರಕ್ಷಿತ್ ಶೆಟ್ಟಿ, ಗಣೇಶ್, ಉಪೇಂದ್ರ, ಸುಮಲತಾ ಅಂಬರೀಶ್, ಅಭಿಷೇಕ್, ಇಶಾನ್, ರಮೇಶ್ ಅರವಿಂದ್, ಆಶಿಕಾ ರಂಗನಾಥ್, ಅನುಶ್ರೀ. ಕ್ರಿಕೆಟರ್ ಅನಿಲ್ ಕುಂಬ್ಳೆ ಮತ್ತಿತರರು ನಟಿಸಿದ್ದಾರೆ. ಹಾಗೇ ಮುಖ್ಯಮಂತ್ರಿ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಾಡು ಮೈ ಹೀರೋ ಎಂಬ ಕಾನ್ಸೆಪ್ಟ್ ನಲ್ಲಿ ಸಿದ್ಧವಾಗಿದೆ. ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಂಗೀತವಿರೋ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಫಿ ಇದೆ. 8 ನಿಮಿಷದ ಈ ಹಾಡನ್ನು ನಿರ್ದೇಶಕ ಪವನ್ ಒಡೆಯರ್ ನಟ-ನಟಿಯರ ಮನೆ ಹೋಗಿ ಚಿತ್ರೀಕರಿಸಿದ್ದಾರೆ. ಇನ್ನು ಈ ಹಾಡು ಮೇ 25 ರಂದು ರಿಲೀಸ್ ಆಗಲಿದೆ.








