ಬಾಗಲಕೋಟೆ: ತಡರಾತ್ರಿಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಮಳೆಯ ಅಬ್ಬರಕ್ಕೆ ಕೆಲವೆಡೆ ಮನೆಗಳು ಕುಸಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಮನ್ನಿಕಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಬಸಮ್ಮ ಹುಣಸಿಕಟ್ಟಿ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಆದರೆ ಮುಂಜಾಗೃತೆಯಿಂದಾಗಿ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾದಾಮಿಯಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆಗೆ ಅಕ್ಕ-ತಂಗಿ ಕಿರು ಜಲಪಾತ ಭೋರ್ಗರೆಯುತ್ತಿದೆ. ಕಿರು ಜಲಪಾತದ ಮೂಲಕ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಬಂದು ಸೇರುತ್ತಿದೆ. ಹೀಗಾಗಿ ಐತಿಹಾಸಿಕ ಅಗಸ್ತ್ಯ ತೀರ್ಥ ಹೊಂಡ ಮೈದುಂಬಿ ಹರಿಯುತ್ತಿದೆ.

ಅಗಸ್ತ್ಯ ತೀರ್ಥ ಹೊಂಡ ಭರ್ತಿಯಾದ ಪರಿಣಾಮ ಬಾದಾಮಿ ಪಟ್ಟಣದ ಕಳ್ಳಿಪೇಟೆ ಓಣಿಯೊಳಗೆ ನೀರು ನುಗ್ಗಿದೆ. ಹೀಗಾಗಿ ಅಗಸ್ತ್ಯ ತೀರ್ಥ ಹೊಂಡಕ್ಕೆ ಹೊಂದಿಕೊಂಡಿರುವ ಹಾಗೂ ಕೆಳಭಾಗದ ನಿವಾಸಿಗಳಿಗೆ ಆತಂಕ ಶುರುವಾಗಿದೆ.
ಕೆರೆ ಒಡೆದು ಗುಡಿಸಲುಗಳು ಜಲಾವೃತ
ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕೆರೆ ಒಡೆದು ಏಕಾಏಕಿ ಗುಡಿಸಲುಗಳಿಗೆ ನೀರು ನುಗ್ಗಿದೆ.
ಮೋಡಿಕೇರ ಬಡಾವಣೆಗೆಯ ಹಲವು ಗುಡಿಸಲುಗಳಿಗೆ ನೀರು ನುಗ್ಗಿದ್ದು, ಸ್ಥಳಕ್ಕೆ ಹುನಗುಂದ ತಹಶೀಲ್ದಾರ್ ಬಸವರಾಜ್ ನಾಗರಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಧೋಳ ತಾಲೂಕಿನ ಕಿಲ್ಲಾ ಹೊಸಕೋಟೆ ಗ್ರಾಮದಲ್ಲಿ ನಿರಂತರವಾಗಿ ತಡರಾತ್ರಿ ಮಳೆ ಸುರಿದ ಪರಿಣಾಮ ಮನೆಯೊಳಗೆ ನೀರು ನುಗ್ಗಿದೆ. ಹುಸೇನಸಾಬ ನದಾಫ್ ಎಂಬುವರ ಮನೆ ಜಲಾವೃತಗೊಂಡಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹೆರೂರು ಗ್ರಾಮದಲ್ಲಿ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದೆ. ನೀರಿನ ಸೆಳವಿಗೆ ರಸ್ತೆಯಲ್ಲಿನ ತಗ್ಗುಗುಂಡಿಗೆ ಯುವಕ ಬಿದ್ದಿದ್ದ. ಗುಂಡಿಯಲ್ಲಿ ಬಿದ್ದ ಯುವಕನನ್ನು ಸ್ನೇಹಿತರು ರಕ್ಷಿಸಿದ್ದಾರೆ.








