ಮೈಸೂರು : ವಿಶ್ವಾದ್ಯಂತ ಕೊರೊನಾ ರೂಪಾಂತರಿ ಓಮ್ರಿಕಾನ್ ( omricon) ಆತಂಕ ಶುರುವಾಗಿದೆ. ಈಗಾಗಲೇ ಭಾರತಕ್ಕೂ ಅದ್ರಲ್ಲು ಕರ್ನಾಟಕಕ್ಕೂ ಓಮ್ರಿಕಾನ್ ಎಂಟ್ರಿಕೊಟ್ಟಿದೆ..ಈ ನಡುವೆ ಮತ್ತೆ ಲಾಕ್ ಡೌನ್ ಭೀತಿಯೂ ಶುರುವಾಗಿದೆ.. ಇದೀಗ ಓಮಿಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ರಂಗಾಯಣದಲ್ಲಿ ಇದೇ ತಿಂಗಳ 10 ನಡೆಯಬೇಕಿದ್ದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ವನ್ನು ಮುಂದೂಡಲಾಗಿದೆ.
ಹೌದು ರಾಜ್ಯ ಸರಕಾರ ಕೋವಿಡ್ ನ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜ.15ರ ತನಕ ಮೂಂದೂಡಲಾಗಿದೆ. ಇದೇ 10ರಿಂದ 19ರವರೆಗೆ ಬಹುರೂಪಿ ಉತ್ಸವ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ, ರಾಜ್ಯ ಸರಕಾರದ ನೂತನ ಕೊವಿಡ್ ಮಾರ್ಗಸೂಚಿ ಅನ್ವಯದ ಹಿನ್ನೆಲೆಯಲ್ಲಿ ರಂಗಾಯಣ ಈ ಕ್ರಮ ತೆಗೆದುಕೊಂಡಿದೆ.
ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ . ಆದರೆ ಸರ್ಕಾರ ಸಭೆ, ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಆದ್ದರಿಂದ ಬಹುರೂಪಿ ನಾಟಕೋತ್ಸವವನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡಲಾಗಿದೆ. ರಾಜ್ಯ ಸರ್ಕಾರದ ಮುಂದಿನ ಆದೇಶ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ರಂಗಾಯಣದ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು, ಮಳಿಗೆಗಳು ಹಾಗೂ ಇದರ ವೀಕ್ಷಣೆಗೆ ಆಗಮಿಸುವವರ ಅಂದಾಜು ಲೆಕ್ಕವೇ ಪ್ರತಿದಿನ 2000 ಮಂದಿಯಾಗುತ್ತಾರೆ. ಆದ್ದರಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಿ ಉತ್ಸವ ಮಾಡಲು ಸಾಧ್ಯವಾಗುದಿಲ್ಲ. ರಂಗಾಸಕ್ತರಿಗಾಗಿಯೇ ಬಹುರೂಪಿ ಉತ್ಸವ ಆಯೋಜಿಸುತ್ತಿರುವುದು. ಆದ್ದರಿಂದ ಈ ಎಲ್ಲಾ ಅಂಶವನ್ನು ಪರಿಗಣಿಸಿ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15ರ ತನಕ ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.








