ಬೆಂಗಳೂರು | ಯುವಕರೇ ಕೊರೊನಾ ಟಾರ್ಗೆಟ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರಗೊಂಡಿದೆ. ಪ್ರತಿ ದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದೃಢಪಡುತ್ತಿವೆ. ಅದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ಅನ್ನೋದು ಆತಂಕಕಾರಿ ವಿಷಯವಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಯುವಕರೇ ಕೊರೊನಾ ಟಾರ್ಗೆಟ್
ಹೌದು..! ನಗರದಲ್ಲಿ ಕೊರೊನಾ ಸೋಂಕು 20 ರಿಂದ 29 ವರ್ಷದ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 20 ರಿಂದ 29 ವರ್ಷ ವಯಸ್ಸಿನ 220 ಮಂದಿ ಯುವಕರು ಕೊರೊನಾ ಸೋಂಕಿಗೊಳಗಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸುತ್ತಿವೆ.
ಎರಡನೇ ಸ್ಥಾನದಲ್ಲಿ 30 ವರ್ಷದಿಂದ 39 ವರ್ಷದೊಳಗಿನ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗಿ ತಗುಲಿದೆ. ಕಳೆದ 24 ಗಂಟೆಗಳಲ್ಲಿ 30 ರಿಂದ 39 ವರ್ಷ ವಯಸ್ಸಿನ ಒಟ್ಟು 210 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದನ್ನ ಗಮನಿಸಿದ್ರೆ ಕೊರೊನಾಗೆ ಯುವಕರೇ ಟಾರ್ಗೆಟ್ ಆಗುತ್ತಿರುವುದು ಗೊತ್ತಾಗುತ್ತಿದೆ.
ಕಾರಣವೇನು..?
ಯುವಕರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಲು ಪ್ರಮುಖ ಕಾರಣ ಬೇಜವಾಬ್ದಾರಿ..! ಹೌದು.. ಕೊರೊನಾವನ್ನ ಯುವ ಜನತೆ ನಿರ್ಲಕ್ಷ್ಯ ಮಾಡಿರುವಂತೆ ಅನಿಸುತ್ತಿದೆ. ಯಾಕೆಂದ್ರೆ ಕೊರೊನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ ಅಂತ ಗೊತ್ತಿದ್ದರೂ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿಲ್ಲ. ಮುಖಕ್ಕೆ ಮಾಸ್ಕ್ ಹಾಕುವುದನ್ನೇ ಮರೆತು ಬಿಟ್ಟಿದ್ದಾರೆ. ಸಾಮಾಜಿಕ ಅಂತರವಂತೂ ಮಂಗಮಾಯವಾಗಿಬಿಟ್ಟಿದೆ.
ಇದು ಯುವ ಜನತೆ ಕಥೆಯಾದ್ರೆ ಇದರಲ್ಲಿ ಕಾಲೇಜುಗಳ ಪಾತ್ರವೂ ಇದೆ. ಈಗ ಕಾಲೇಜುಗಳು ಆರಂಭವಾಗಿದ್ದು, ಹಾಸ್ಟಲ್ ಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಳ್ಳುತ್ತಿದ್ದಾರೆ. ಆದ್ರೆ ಹಾಸ್ಟಲ್ ನಲ್ಲಿ ಕೊರೊನಾ ಮಾರ್ಗಸೂಚಿ ಮಾತ್ರ ಪಾಲನೆ ಆಗುತ್ತಿಲ್ಲ. ಒಂದೊಂದು ಕೋಣೆಯಲ್ಲಿ ಐದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರೋದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.