ಬೆಂಗಳೂರು : ನಗರದ ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ರಾಜ್ಯಾದಾದ್ಯಂತ ಭಾರಿ ಸದ್ದು ಮಾಡಿದೆ. ಈ ಗಲಭೆ ಮೂಲ ಕಾರಣ ಎನ್ನಲಾದ ಆರೋಪಿ ನವೀನ್ ಕೊನೆಗೂ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ನವೀನ್ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಗಲಭೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಆರೋಪಿ ನವೀನ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಮೊದಲು ನವೀನ್ ನನ್ನ ಮೊಬೈಲ್ ಫೋನ್ ಕಳೆದುಹೋಗಿದೆ ಹಾಗೂ ಫೇಸ್ ಬುಕ್ ಹ್ಯಾಕ್ ಆಗಿದೆ ಎಂದು ಹೇಳಿಕೆ ನೀಡಿದ್ದ. ಆದ್ರೆ ಇದೀಗ ನವೀನ್ ತಪ್ಪೊಪ್ಪಿಕೊಂಡಿದ್ದು, ಫೇಸ್ ಬುಕ್ ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದು ನಾನೇ ಎಂದು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.








