ಮೈಸೂರು : ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಂಎಲ್ ಸಿ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಕಾಂಗ್ರೆಸ್ ನ ಪಾಪದ ಕೂಸು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಪಕ್ಷವೇ ಕಾರಣ. ಈ ಗಲಭೆಗೂ ಬಿಜೆಗೂ ಯಾವುದೇ ಸಂಬಂಧ ಇಲ್ಲ. ಇದು ಕಾಂಗ್ರೆಸ್ ಹಾಗೂ ಸ್ಥಳೀಯ ಸಂಘಟನೆಗೂ ನಡೆಯುತ್ತಿರುವ ಗಲಭೆ. ಸಿಎಎ ಹೋರಾಟದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದರು.
ಇದೇ ವೇಳೆ ಜಮೀರ್ ಖಾನ್ ಬಗ್ಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹಮ್ಮದ್ ಬೆಂಕಿ ಬಿದ್ದ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಬದಲಿಗೆ ಬೆಂಕಿ ಹಾಕಿದವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಪಾದರಾಯನಪುರ ವಿಚಾರದಲ್ಲಿ ಜೈಲಿಗೆ ಹೋಗಿ ಬಂದವರನ್ನ ಮಾಲೆ ಹಾಕಿ ಸ್ವಾಗತಿಸಿದ್ದರು. ಇವರೇನು ಸ್ವಾತಂತ್ರ‍್ಯ ಹೋರಾಟ ಮಾಡಲು ಹೋಗಿದ್ದರಾ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.








