ಬೆಂಗಳೂರಲ್ಲಿ ಪುಂಡರ ಪುಂಡಾಟ : ಸರ್ ಕ್ರಮ ತಗೊಳ್ಳಿ.. ಮೇಲಾಧಿಕಾರಿ ಬಳಿ ಕಣ್ಣೀರಿಟ್ಟು ಮನವಿ ಮಾಡಿರುವ ಕೆ.ಜಿ.ಹಳ್ಳಿ ಪೊಲೀಸ್ ಸಿಬ್ಬಂದಿ..!
ಬೆಂಗಳೂರಲ್ಲಿ ಪುಂಡರ ಪುಂಡಾಟ- ಕೆಜಿ ಹಳ್ಳಿ, ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಪೊಲೀಸರಿಗೆ ಮೊದಲು ಏನು ಮಾಡಬೇಕೋ ಎಂಬುದೇ ಗೊತ್ತಾಗಲಿಲ್ಲ. ಐನೂರಕ್ಕೂ ಹೆಚ್ಚು ಜನರ ಗುಂಪು ಏಕಾಏಕಿ ಕಲ್ಲು ತೂರಾಟ ಮಾಡ್ಕೊಂಡು, ಸಿಕ್ಕ ಸಿಕ್ಕ ಮನೆ, ವಾಹನಗಳಿಗೆ ಬೆಂಕಿ ಹಚ್ಚಿ ರಕ್ಕಸ ಪ್ರವೃತ್ತಿಯನ್ನು ಪ್ರದರ್ಶಿಸಿದ್ರು. ಇದರಿಂದ ಬೆರಳೆಣಿಕೆಯಷ್ಟಿದ್ದ ಕೆ.ಜಿ ಹಳ್ಳಿ ಪೊಲೀಸರಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದೇ ತಿಳಿಯಲಿಲ್ಲ.
ಕೊನೆಗೆ ತಮ್ಮ ಮೇಲಾಧಿಕಾರಿಗಳಿಗೆ ಕೆ.ಜಿ. ಹಳ್ಳಿ ಪೊಲೀಸರು ಮನವಿ ಮಾಡಿಕೊಂಡಿರುವ ಆಡಿಯೋ ಈಗ ವೈರಲ್ ಆಗುತ್ತಿದೆ. ಸರ್ ಏನಾದ್ರೂ ಡಿಸಿಷನ್ ತಗೊಳ್ಳಿ ಸರ್, ಕೆಎಸ್‍ಆರ್‍ಪಿಯವರು ಬಂದಿಲ್ಲ. ನಾವು ಒಳಗಡೆ ಇದ್ದೀವಿ ಯಾರು ಕೂಡ ಕಾಪಾಡಲು ಬರಲ್ಲ. ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೀವು ಡಿಸಿಷನ್ ತಗೊಳ್ಳಿ ಸರ್, ನಾವು ಮಾಡಿಯೇ ಮಾಡುತ್ತೇವೆ ಎಂದು ಮೇಲಾಧಿಕಾರಿಗೆ ಕಣ್ಣೀರಿಟ್ಟು ಮನವಿ ಮಾಡಿದ್ದರು. ಆಗ ಮೇಲಾಧಿಕಾರಿ, ನಿಮ್ಮ ಆತ್ಮರಕ್ಷಣೆಗೋಸ್ಕರ ಏನೋ ಬೇಕೋ ಮಾಡಿ. ಡಿಸಿಷನ್ ತಗೊಳ್ಳಿ ಎಂದು ಹೇಳಿದ್ದಾರೆ.
ಶಾಸಕ ಶ್ರೀನಿವಾಸ್ ಮೂರ್ತಿ ಅವರ ಅಳಿಯ ಮಾಡಿರುವ ಒಂದು ಫೇಸ್ ಬುಕ್ ಪೋಸ್ಟ್ ನಿಂದ ಡಿಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಏರಿಯಾಗಳಲ್ಲಿ ಬೆಂಕಿಹತ್ತಿಕೊಂಡಿದೆ. ಶಾಸಕರ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಏರಿಯಾದಲ್ಲಿರುವ ಮನೆಗಳ ಮೇಲೂ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ.
ದುಷ್ಕರ್ಮಿಗಳ ಹಾವಳಿ ಮೀತಿ ಮೀರಿದಾಗ ಪೊಲೀಸರು ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಯ್ತು. ಇದ್ರಿಂದ ಮೂವರು ದುಷ್ಕರ್ಮಿಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 140ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಈಗಾಗಲೇ ಈ ಕೃತ್ಯದ ಬಗ್ಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗುತ್ತಿದೆ. ಸಿಎಂ ಬಿಎಸ್‍ವೈ ಗಲಾಟೆಯ ಕುರಿತಂತೆ ಮಾಹಿತಿ ಪಡೆದುಕೊಂಡು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.