ಬೆಂಗಳೂರು : ಉತ್ತರ ಕರ್ನಾಟಕದ ಜನ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದ್ರೆ, ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರೊಟ್ಟಿ ಬಡಿಯುತ್ತಾ ಕುಳಿತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರವಾಹದ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, “ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ. ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ. ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ. ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ”.
“ಗೃಹಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ ಎಂದು ಪ್ರಶ್ನಿಸಿರುವ ಸಿದ್ದು, ಸಿಎಂ ಯಡಿಯೂರಪ್ಪನವರೇ ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ ಎಂದು ಆಗ್ರಹಿಸಿದ್ದಾರೆ.








