ಶ್ರೀರಾಮಚಂದ್ರ ಭಾರತದ ಅಸ್ಮಿತೆಯ ಪ್ರತೀಕ : ಸಚಿವ ವಿ.ಸೋಮಣ್ಣ
ಬೆಂಗಳೂರು : ಪ್ರಭು ಶ್ರೀರಾಮಚಂದ್ರ ನಮ್ಮ ನೆಲದ ಅಸ್ಮಿತೆಯ ಪ್ರತೀಕ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಯುವಪಡೆ ಹಮ್ಮಿಕೊಂಡಿದ್ದ ಅದ್ದೂರಿ ಶ್ರೀರಾಮನವಮಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸ್ಥೆೃರ್ಯೇಣ ಹಿಮವಾನಿವ ಎಂದು ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಧೈರ್ಯವನ್ನು ಹಿಮಾಲಯಕ್ಕೆ ಹೋಲಿಸಿದ್ದರು. ಕಷ್ಟಗಳಿಗೆ ಎದೆಕೊಡುವ ಆದರ್ಶಕ್ಕೆ ಬಹುಷಃ ರಾಮನಿಗಿಂತ ಸೂಕ್ತ ಮತ್ತೊಂದು ವ್ಯಕ್ತಿತ್ವ ಇಲ್ಲವೆಂದೆನಿಸುತ್ತದೆ ಎಂದರು.
ಮೂರು ಸಾವಿರಕ್ಕೂ ಹೆಚ್ಚು ಜನ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಒಬ್ಬ ಮನುಷ್ಯ ಯಾವ ರೀತಿಯಲ್ಲಿ ತಮ್ಮ ಜೀವನವನ್ನು ಆದರ್ಶವಾಗಿ ನಡೆಸಬೇಕು ಎಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಶ್ರೀರಾಮಚಂದ್ರ.
ಅವರ ಮೇಲಿನ ಭಕ್ತಿಗೆ ಹಾಗೂ ಬೆಂಗಳೂರು ಕರಗ ಮಹೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜನರ ಒಂದು ಒಳ್ಳೆ ಪ್ರತಿಕ್ರಿಯೆ ಸಿಕ್ಕಿರುವುದು ತುಂಬ ಖುಷಿಯಾಗಿದೆ ಎಂದು ಸಚಿವರು ಮಾತನಾಡಿದರು.
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ ಶನಿಮಹಾತ್ಮ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಮಾರುತಿ ಮಂದಿರದ ವರೆಗೂ ನಡೆಯಿತು. ಪಾದಯಾತ್ರೆಯಲ್ಲಿ ಭವ್ಯ ಶ್ರೀರಾಮನ ಹಾಗೂ ಆಂಜನೇಯಸ್ವಾಮಿ ಮೂರ್ತಿಗಳು ಗಮನ ಸೆಳೆದವು. ಕೊನೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗೆ ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.









