Bangalore | ಹೊಸ ಶಿಕ್ಷಣ ನೀತಿಯೊಂದಿಗೆ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ : ರಾಜ್ಯಪಾಲ
ಬೆಂಗಳೂರು : ಹೊಸ ಶಿಕ್ಷಣ ನೀತಿಯೊಂದಿಗೆ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ ದೊರಕಲಿದೆ ಎಂದು ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬಂಟರ ಸಂಘದ ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತ-2 ನೂತನ ಶಾಲಾ ಕಟ್ಟಡದ ಸಂಕೀರ್ಣ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ನೂತನ ಶಾಲಾ ಕಟ್ಟಡವನ್ನು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.
ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆಯ ಶಾಲಾ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ತಾವರ್ ಚಂದ್ ಗೆಹ್ಲೋಟ್, ಈ ವಿದ್ಯಾಸಂಸ್ಥೆ ಒಂಬತ್ತು ಎಕರೆ ವಿಸ್ತೀರ್ಣದಲ್ಲಿ ಅದ್ಭುತ ವ್ಯವಸ್ಥೆಯ ಶೈಕ್ಷಣಿಕ ಸಂಕೀರ್ಣ ನಿರ್ಮಾಣ ಮಾಡಿದೆ. ನಗರದ ಜಂಜಾಟಗಳಿಂದ ದೂರವಿರುವ ಈ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಾಂತ ವಾತಾವರಣ ಸೃಷ್ಟಿಸಿಕೊಟ್ಟಿದೆ. ಇಂತದ್ದೊಂದು ಪ್ರಯತ್ನ ಮಾಡಿರುವ ಈ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.
ಈ ವಿದ್ಯಾಸಂಸ್ಥೆ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವಂತಾಗಲಿ ಎಂದು ನಾನು ಬಯಸುತ್ತೇನೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಾಢ್ಯರಾಗುತ್ತಾರೆ. ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ದೇಶದ ಉನ್ನತಿಗೆ ಹೆಚ್ಚಿನ ಮಹತ್ವಪೂರ್ಣ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಎಂಡ್ ಸ್ಟ್ಯಾಂಡ್ ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ವಿದ್ಯಾರ್ಥಿಗಳು ಶಕ್ತಿಶಾಲಿ ಭಾರತವನ್ನು ಕಟ್ಟಲು ಸಾಧ್ಯವಿದೆ. ಇದರ ಒಟ್ಟು ಫಲಿತಾಂಶವೇ ಆತ್ಮನಿರ್ಭರ ಭಾರತ. ಭವಿಷ್ಯದಲ್ಲಿ ಉದ್ಯೋಗ ಸೃಷ್ಠಿ, ಮಹಿಳಾ ಸಶಕ್ತಿಕರಣ ಹಾಗೂ ಪರಸ್ಪರ ಸಹಭಾಗಿತ್ವದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ವಿದ್ಯಾರ್ಥಿಗಳ ನೀಡಬೇಕಿರುವ ಕೊಡುಗೆ ಗಮನಾರ್ಹವಾದುದ್ದು ಎಂದರು.
ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ಶಿಕ್ಷಣದ ಜೊತೆ ನಮ್ಮ ಪಾರಂಪರಿಕ ಪ್ರತಿಭೆ–ಕೌಶಲ್ಯಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೊಸ ಶಿಕ್ಷಣ ನೀತಿಯ ಸಹಾಯದಿಂದ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ ದೊರಕಲಿದೆ. ಬಂಟ ಸಂಘದ ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆಯೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂಬ ನಂಬಿಕೆ ನನಗಿದೆ ಎಂದು ಗೌರವಾನ್ವಿತ ರಾಜ್ಯಪಾಲರು ಭರವಸೆ ವ್ಯಕ್ತಪಡಿಸಿದರು.