ಬೆಂಗಳೂರು, ಜೂನ್ 6 : ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿಭಾಗಗಳಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಆನ್-ಲೈನ್ ಮೂಲಕ ಪಾಠ ಮುಂದುವರೆಸಲು ಸೂಚಿಸಲಾಗಿದೆ.
ಕರ್ತ್ಯವ್ಯಕ್ಕೆ ಹಾಜರಾಗುವ ಎಲ್ಲ ಸಿಬ್ಬಂದಿಗಳು ಮತ್ತು ಪ್ರಾಧ್ಯಾಪಕರು ವಿಭಾಗದ ಕಛೇರಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಬೆಂಗಳೂರು ವಿಶ್ವವಿದ್ಯಾಲಯ ತಿಳಿಸಿದೆ. ಕಂಟೈನ್ಮೆಂಟ್ ವಲಯಗಳೆಂದು ಗುರುತಿಸಲ್ಪಟ್ಟ ಪ್ರದೇಶದಲ್ಲಿ ವಾಸವಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿನಾಯಿತಿ ನೀಡಲಾಗಿದ್ದು, ಅವರು ಹಾಜರಾಗದಂತೆ ಸೂಚಿಸಲಾಗಿದೆ.
ಜೂನ್ 30 ರ ವರೆಗೆ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ಪಾಠ ಮುಂದುವರೆಸಬೇಕು. ಅಷ್ಟೇ ಅಲ್ಲ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಬೆಂಗಳೂರು ವಿವಿ ಆದೇಶದಲ್ಲಿ ತಿಳಿಸಲಾಗಿದೆ.








