ಕೋವಿಡ್-19 ನಿಂದ ಚೇತರಿಸಿಕೊಂಡ ಬೆಂಗಳೂರಿನ ಮಹಿಳೆಗೆ ಮತ್ತೊಮ್ಮೆ ಸೋಂಕು ದೃಢ
ಬೆಂಗಳೂರು, ಸೆಪ್ಟೆಂಬರ್07: ಜುಲೈನಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡ 27 ವರ್ಷದ ಬೆಂಗಳೂರಿನ ಮಹಿಳೆಗೆ ಮತ್ತೊಮ್ಮೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪ್ರಕಾರ, ಮಹಿಳೆಗೆ ಜುಲೈನಲ್ಲಿ ಕೊರೋನವೈರಸ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಯ ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದೀಗ ಮತ್ತೊಮ್ಮೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ಪ್ರತಿಕ್ ಪಾಟೀಲ್ ಅವರು, ಜುಲೈ ಮೊದಲ ವಾರದಲ್ಲಿ ಮಹಿಳೆಯಲ್ಲಿ ಜ್ವರ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸೋಂಕಿನಿಂದ ಗುಣಮುಖರಾದ ಬಳಿಕ ಪುನರಾವರ್ತಿತ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಫಲಿತಾಂಶವು ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಜುಲೈ 24 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಆದಾಗ್ಯೂ, ಸುಮಾರು ಒಂದು ತಿಂಗಳ ನಂತರ, ಆಗಸ್ಟ್ ಕೊನೆಯ ವಾರದಲ್ಲಿ, ಅವರಲ್ಲಿ ಮತ್ತೆ ಕೊರೋನಾ ಸೋಂಕಿನ ಲಘು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಪರೀಕ್ಷೆಯಲ್ಲಿ ಅವರಿಗೆ ಪುನಃ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದರು.
ಇದು ಬಹುಶಃ ಬೆಂಗಳೂರಿನಲ್ಲಿ ಕೋವಿಡ್ ಮರು ಸೋಂಕಿನ ಮೊದಲ ವರದಿಯಾಗಿದೆ. ಸಾಮಾನ್ಯವಾಗಿ, ಸೋಂಕಿನ ಸಂದರ್ಭದಲ್ಲಿ, ಕೋವಿಡ್ ಇಮ್ಯುನೊಗ್ಲಾಬ್ಯುಲಿನ್ ಜಿ ಪ್ರತಿಕಾಯ ಕೊರೋನಾ ಸೋಂಕು ದೃಢಪಟ್ಟ 2-3 ವಾರಗಳ ನಂತರ ಸೃಷ್ಟಿ ಯಾಗುತ್ತದೆ. ಆದರೆ ಇವರಿಗೆ ಪ್ರತಿಕಾಯ ಸೃಷ್ಟಿಯಾಗಿರಲಿಲ್ಲ. ಅಂದರೆ ಸೋಂಕಿನ ನಂತರ ಅವರು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲಿಲ್ಲ ಎಂದು ಪಾಟೀಲ್ ಹೇಳಿದರು.
ಪ್ರತಿಕಾಯಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಉತ್ಪತ್ತಿಯಾಗುವುದಿಲ್ಲ ಅಥವಾ ಅವು ಅಭಿವೃದ್ಧಿ ಹೊಂದಿದರೆ ಸಾಕಷ್ಟು ಕಾಲ ಉಳಿಯುವುದಿಲ್ಲ. ಆದ್ದರಿಂದ, ವೈರಸ್ ದೇಹಕ್ಕೆ ಪ್ರವೇಶಿಸಲು ಮತ್ತು ಸೋಂಕನ್ನು ಮತ್ತೆ ಉಂಟುಮಾಡಲು ಅನುವು ಮಾಡಿಕೊಡುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.