ಬೆಂಗಳೂರು: ಬೆಂಗಳೂರಿನಲ್ಲಿ ನೀರಾ ಮಳಿಗೆಗಳನ್ನು ತೆರೆಯಲು ಅಬಕಾರಿ ಇಲಾಖೆ ಒಪ್ಪಿಗೆ ನೀಡಿದ್ದು, ಅತೀ ಶೀಘ್ರದಲ್ಲಿಯೇ ನಗರದಲ್ಲಿ ಎಂಟರಿಂದ ಹತ್ತು ಮಳಿಗೆಗಳು ಆರಂಭವಾಗಲಿವೆ. ತೆಂಗು ಬೆಳೆಗಾರರ ಪರ್ಯಾಯ ಲಾಭ ತಂದು ಕೊಡುವ ನೀರಾ ಪಾನೀಯಕ್ಕೆ ಉತ್ತಮ ಬೇಡಿಕೆ ಬರುತ್ತಿದೆ. ಹೀಗಾಗಿ ಬೆಂಗಳೂರಲ್ಲಿ ಮಳಿಗೆ ತೆರೆಯಲು ಅಬಕಾರಿ ಇಲಾಖೆ ಒಪ್ಪಿಗೆ ನೀಡಿದೆ. ನಗರದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ನೀರಾ ಮಳಿಗೆ ಪ್ರಾರಂಭವಾಗಿದ್ದು, ಈಗ ಹಾಪ್‌ಕಾಮ್ಸ್ ಸಹಭಾಗಿತ್ವದಲ್ಲಿ ನಗರದ ಐದು ಭಾಗಗಳಲ್ಲಿ ಮತ್ತು ಖಾಸಗಿಯ ಸಹಭಾಗಿತ್ವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ನೀರಾ ಮಳಿಗೆ ತಲೆ ಎತ್ತಲಿದೆ.
ಎಲ್ಲೆಲ್ಲಿ ನೀರಾ ಲಭ್ಯ!
ಈಗ ಲಾಲ್‌ಬಾಗ್ , ನಗರ ಸಿವಿಲ್ ನ್ಯಾಯಾಲಯ ಆವರಣ ಮತ್ತು ಜೆಪಿ ನಗರದ ಹಾಪ್‌ಕಾಮ್ಸ್ ನಲ್ಲಿ ಮಾತ್ರ ನೀರಾ ಲಭ್ಯವಾಗುತ್ತಿದೆ. ಪೀಣ್ಯ ಎರಡನೇ ಹಂತ, ಮತ್ತಿಕೆರೆಯ ಜೆಪಿ ಪಾರ್ಕ್ , ಹನುಮಂತನಗರ, ಜಯನಗರ ನಾಲ್ಕನೇ ಹಂತ, ಕನಕಪುರ ರಸ್ತೆ, ಮಲ್ಲೇಶ್ವರ, ಕೆಆರ್ ಪುರದಲ್ಲಿ ಮಳಿಗೆ ಪ್ರಾರಂಭವಾಗಲಿದೆ.